– ವೇತನಕ್ಕಾಗಿ ಹೋರಾಟಕ್ಕಿಳಿದ ನೌಕರರು
ಮಂಡ್ಯ: ಮೈಶುಗರ್ ಕಾರ್ಖಾನೆ (Mysugar Factory) ಸಕ್ಕರೆ ನಾಡು ಮಂಡ್ಯ ಜನರಿಗೆ ಪ್ರತಿಷ್ಠೆ ಸಂಕೇತ. ಯಾವುದೇ ಚುನಾವಣೆ ಎದುರಾಗಲಿ ರಾಜಕೀಯ ಪಕ್ಷಗಳು ಮೈಶುಗರ್ ಅಸ್ತ್ರ ಪ್ರಯೋಗ ಮಾಡೋದನ್ನು ಮಾತ್ರ ಮರೆಯೋದಿಲ್ಲ. ಕಳೆದ ಎರಡು ದಶಕದಿಂದ ರಾಜ್ಯ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆಂದು ನೂರಾರು ಕೋಟಿ ಅನುದಾನ ನೀಡಿದೆ. ಆದರೆ ಇಂದಿಗೂ ರೋಗಗ್ರಸ್ತ ಹಣೆಪಟ್ಟಿಯಿಂದ ಹೊರ ಬಂದಿಲ್ಲ. ಒಂದಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಾಗುತ್ತಿದ್ದು, ಇದೀಗ ಕಾರ್ಖಾನೆಯ ನೌಕರರು ತಮ್ಮ ಸಂಬಳ ನೀಡುವಂತೆ ಆಗ್ರಹಿಸಿ ಬೀದಿಗೆ ಇಳಿದಿದ್ದಾರೆ.
ಮೈಶುಗರ್ ಕಾರ್ಖಾನೆಯಲ್ಲಿ 250ಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮಾತ್ರವಲ್ಲ ಬಿಹಾರ ಸೇರಿದಂತೆ ಹೊರ ರಾಜ್ಯದ ಕಾರ್ಮಿಕರೂ ಕಡಿಮೆ ಸಂಬಳಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಈ ನೌಕರರಿಗೆ ಕಳೆದ ಎರಡು ತಿಂಗಳಿಂದ ವೇತನ ನೀಡಿಲ್ಲ. ಸಂಬಳ (Salary) ನೀಡುವಂತೆ ಹಲವು ಭಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರು ಇದೀಗ ದಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಬಂಧನ
ಇನ್ನು ಮೈಶುಗರ್ ವ್ಯಾಪ್ತಿಯ ಕಬ್ಬು ಸಂಪೂರ್ಣ ಖಾಲಿಯಾಗುವ ಮೊದಲೇ ಕಬ್ಬು ಅರೆಯುವ ಕಾರ್ಯ ಬಂದ್ ಮಾಡಿದ್ದರಿಂದ ಇತ್ತೀಚೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನೌಕರರು ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಗುತ್ತಿಗೆ ಪಡೆದಿರುವ ಆರ್.ಬಿ.ಟೆಕ್ ಏಜೆನ್ಸಿ ಅಧಿಕಾರಿಗಳನ್ನು ಕೇಳಿದರೆ ಕಾರ್ಖಾನೆಯಿಂದ ಹಣ ಬಿಡುಗಡೆಯಾಗಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಮತ್ತೊಂದೆಡೆ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೂಚನೆ ನೀಡಿದರೂ ಕೆಲವು ಅಧಿಕಾರಿಗಳು ಸಂಬಳದ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿ 2.0 ಸರ್ಕಾರ – ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣವಚನ