ಬೆಂಗಳೂರು: ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಫುಲ್ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ನಿಫಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯದಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ. ಜ್ವರ, ವಾಂತಿ, ಸುಸ್ತು ಇಂತಹ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತ ಪರೀಕ್ಷೆಯ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಮೂಲಗಳು ಪಬ್ಲಿಕ್ ಟಿವಿಗೆ ಖಚಿತಪಡಿಸಿವೆ.
ನಿಪಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.
Advertisement
Advertisement
ವೈರಸ್ ಹೇಗೆ ಹರಡುತ್ತದೆ?
ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನೋದ್ರಿಂದ ಹರಡುತ್ತೆ.
ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.
ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.
Advertisement
ನಿಪಾ ವೈರಸ್ ಲಕ್ಷಣಗಳೇನು?
– ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
– ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
– ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
– ಬಳಿಕ ಪ್ರಜ್ಞಾಹೀನರಾಗುತ್ತಾರೆ
– ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
– ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು
Advertisement
ಇನ್ನು ಕೇರಳದ ನಿಪಾ ವೈರಸ್ ಭೀತಿಯಿಂದ ಅಕ್ಕ ಪಕ್ಕದ ರಾಜ್ಯಗಳು ಎಚ್ಚರಿಕೆಯಿಂದ ಇರಬೇಕಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೂಚನೆಯಂತೆ ಇಂದು ಬೆಳಗ್ಗೆಯೇ ಕೇಂದ್ರ ಸರ್ಕಾರದ ವೈದ್ಯಕೀಯ ತಂಡವೊಂದು ಕೇರಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕೇರಳದ ಆರೋಗ್ಯ ಸಚಿವರ ಜೊತೆ ಸಮಾಲೋಚನೆಯನ್ನು ನಡೆಸಿದೆ. ಸದ್ಯ ಕೇರಳದ ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಬಾವಲಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಕೇರಳದ ಎಲ್ಲಾ ಜಿಲ್ಲಾಸ್ಪತ್ರೆಗಳಿಗೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇವರ ರಕ್ತದ ಮಾದರಿಯನ್ನು ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಇನ್ನಷ್ಟೇ ಬರಬೇಕಿದ್ದು, ಇಂದು ರಾತ್ರಿಯೊಳಗೆ ವರದಿ ಅಧಿಕಾರಿಗಳ ಕೈಸೇರುವ ಸಾಧ್ಯತೆಯಿದೆ.