ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಮೈಸೂರಲ್ಲೂ ಕಾಣುತ್ತಿಲ್ಲ, ಬಾದಾಮಿ ಕ್ಷೇತ್ರದಲ್ಲೂ ಕಾಣುತ್ತಿಲ್ಲ. ಅವರ ಬೇಗ ಹೊರಗೆ ಬಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿಎಂ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಒಬ್ಬ ಮತ್ಸದ್ದಿಯಾಗಿ ಅವರು ಕೊಟ್ಟ ಸಲಹೆಗಳು ಬಹಳ ಉತ್ತಮವಾಗಿವೆ ಎಂದು ಹೇಳಿದರು.
Advertisement
Advertisement
ಇದೇ ವೇಳೆ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.
Advertisement
Advertisement
ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದರು. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದರು.
ಜಿಟಿ ದೇವೇಗೌಡರ ಜೊತೆ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿಎಂ ಭೇಟಿ ಸಹಜ, ಇಬ್ಬರು ರಾಜಕಾರಣಿಗಳು ಭೇಟಿಯಾದ ಮೇಲೆ ರಾಜಕಾರಣ ಮಾತನಾಡದೆ ಇರೋಕೆ ಆಗುತ್ತಾ? ಜಿಟಿ ದೇವೇಗೌಡರಿಗೆ ಬಿಜೆಪಿ ಹಳೆಯ ಪಾರ್ಟಿ, ಅವರೇನೂ ಬಿಜೆಪಿಗೆ ಹೊಸಬರಲ್ಲ. ನೆರೆ ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಮಾಡಬಾರದು, ದಸರಾ ಅದ್ಧೂರಿಯಾಗೆ ಮಾಡಬೇಕು. ದಸರಾದಲ್ಲಿ ಸರಳತೆ ಬೇಡ ಎಲ್ಲಾ ಕಷ್ಟ ನಿವಾರಿಸು ಅಂತಾನೇ ನಾಡಹಬ್ಬ ಮಾಡುವುದು ಇದರಲ್ಲಿ ಸರಳತೆ ಬೇಡ ಎಂದು ಹೇಳಿದರು.
ಶಾಸಕರ ಅನರ್ಹತೆ ಪ್ರಕರಣದಲ್ಲಿ ನ್ಯಾಯಾಲಯದ ನಿಲುವಿಗೆ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಇದನ್ನು ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ. ನಮಗೆ ಅನರ್ಹಗೊಳಿಸವಾಗ ನಿಯಮಗಳನ್ನು ಪಾಲಿಸಿಲ್ಲ. ನಮಗೆ ನ್ಯಾಯ ಸಿಕ್ಕಿಲ್ಲ. ಈ ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾವು ಎಲ್ಲರೂ ಧೈರ್ಯವಾಗಿದ್ದೇವೆ. ನಾವೆಲ್ಲರೂ ಧೈರ್ಯವಂತರೇ ಇರುವುದು ಎಂದು ಹೇಳಿದರು.