– ವಿದ್ಯಾರ್ಥಿಗಳು ಬರೆದ ಉತ್ತರವನ್ನು ನೋಡದ ಮೌಲ್ಯಮಾಪನಕಾರರು!
ಮೈಸೂರು: ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿ ಉತ್ತರ ಪತ್ರಿಕೆಯನ್ನು ಸರಿಯಾಗಿ ಮರು ಮೌಲ್ಯಮಾಪನ ಮಾಡದ ಪ್ರಕರಣವೊಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ 1,760 ರೂ. ಪಾವತಿಸಿ, ಮರು ಮೌಲ್ಯಮಾಪನ ಹಾಗೂ ಉತ್ತರ ಪ್ರತಿ ಜೆರಾಕ್ಸ್ ಗಾಗಿ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸ್ವೀಕರಿಸಿ, ಮರು ಮೌಲ್ಯಮಾಪನ ಮಾಡಿದ ಬಳಿಕ ಕಳುಹಿಸಲಾದ ಪ್ರತಿಯಲ್ಲಿ ಕೆಲವು ಉತ್ತರಗಳನ್ನು ಮೌಲ್ಯಮಾಪಕರು ನೋಡಿಯೇ ಇಲ್ಲ. ಜೊತೆಗೆ ಅಂಕ ಎಣಿಕೆಯಲ್ಲಿಯೂ ತಪ್ಪಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ದೂರಿದ್ದಾರೆ.
ಮೈಸೂರು ವಿವಿ ಪದವಿ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಒಂದು ವಿಷಯಕ್ಕೆ 1,100 ರೂ. ಹಾಗೂ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು 660 ರೂ. ಪಾವತಿಸಬೇಕು. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳು ಪಾವತಿಸಿದರೂ ಮೌಲ್ಯಮಾಪಕರು ಕೆಲವು ಉತ್ತರಗಳನ್ನೇ ಮೌಲ್ಯ ಮಾಪನ ಮಾಡಿಲ್ಲ. ಮೌಲ್ಯಮಾಪಕರ ಬೇಜಾವಾಬ್ದಾರಿತನ ವಿದ್ಯಾರ್ಥಿಗಳ ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯವು ಮರು ಮೌಲ್ಯಮಾಪನದ ಹೆಸರಿನಲ್ಲಿ ಹಣ ದೋಚುತ್ತಿದೆಯೇ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.
ಮೌಲ್ಯಮಾಪಕರ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕಕಿಂತ ಹೆಚ್ಚಿನ ಹಣವನ್ನು ಮರು ಮೌಲ್ಯಮಾಪನಕ್ಕೆ ಪಾವತಿಸುವಂತಾಗುತ್ತಿದೆ. ಹಣ ಪಾವತಿ ಮಾಡಿದರೂ ಸರಿಯಾಗಿ ಮೌಲ್ಯಮಾಪನ ಮಾಡುತ್ತಿಲ್ಲ. ಹೀಗೆ ಮಾಡುವುದರಿಂದ ವಿಶ್ವವಿದ್ಯಾಲಯದ ಮೌಲ್ಯಮಾಪಕರ ಮೇಲೆ ವಿಶ್ವಾಸ ಕಡಿಮೆಯಾಗುತ್ತದೆ. ದಯವಿಟ್ಟು ನಮ್ಮ ಜೀವನ ಜೊತೆಗೆ ಆಟವಾಡಬೇಡಿ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv