ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಸಹ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ. ಜನತಾದಳವೂ ಗೆದ್ದಿಲ್ಲ. ಒಟ್ಟು 16 ಚುನಾವಣೆಗಳು ನಡೆದಿದ್ದು, ಇಲ್ಲಿ ಕಾಂಗ್ರೆಸ್ 13 ಸಲ, ಬಿಜೆಪಿ 3 ಸಲ ಗೆದ್ದಿದೆ. ಗುರುಪಾದಸ್ವಾಮಿ, ಹೆಚ್.ಡಿ.ತುಳಸಿದಾಸಪ್ಪ, ಎಂ.ರಾಜಶೇಖರಮೂರ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೆಚ್.ವಿಶ್ವನಾಥ್ ಘಟಾನುಘಟಿ ನಾಯಕರು ಸಂಸದರಾಗಿದ್ದ ಕ್ಷೇತ್ರ ಇದು. ನಾಲ್ಕು ಬಾರಿ ಈ ಕೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದಾರೆ. ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸ್ ಅವರು ಈ ಕ್ಷೇತ್ರದಿಂದ 1991ರಲ್ಲಿ ಗೆದ್ದಿದ್ರು.
ಈಗ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೀಗ ಆಗ್ನಿ ಪರೀಕ್ಷೆ ಎದುರಾಗಿದ್ದು, ಕಾಳಗ ಜೋರಾಗಿಯೇ ಇದೆ. ಇಡೀ ಕ್ಷೇತ್ರದಲ್ಲಿ ಜಾತಿಯೇ ದೊಡ್ಡ ಟ್ರಂಪ್ ಕಾರ್ಡ್. ಅದರಲ್ಲೂ ಈ ಬಾರಿ ಒಕ್ಕಲಿಗ ಸಮುದಾಯದ ಮತಗಳ ಕ್ಷೇತ್ರದಲ್ಲಿ ನಿರ್ಣಾಯಕ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದರೂ ಕೂಡ ಜೆಡಿಎಸ್ ನ ಸಂಪ್ರದಾಯಿಕ ಮತಗಳಾದ ಒಕ್ಕಲಿಗರ ಮತಗಳು ಮೈತ್ರಿ ಅಭ್ಯರ್ಥಿಗೆ ಬರುವುದು ಅಷ್ಟು ಸುಲಭವಿಲ್ಲ.
Advertisement
ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ವಿಜಯ್ ಶಂಕರ್‍ಗೆ ಕಳೆದ ಬಾರಿ ಮೈಸೂರಿನಿಂದ ಟಿಕೆಟ್ ಸಿಗದೇ ಹಾಸನದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈಗ ಅದೇ ವಿಜಯಶಂಕರ್ ಸಿದ್ದರಾಮಯ್ಯ ಬಲದಿಂದ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದು, ಎದುರಾಳಿಯಾಗಿ ಬಿಜೆಪಿಯ ಪ್ರತಾಪ್ ಸಿಂಹ ಇದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗುದ್ದಾಟ ಈಗ ಮೈತ್ರಿ ಪಕ್ಷಗಳಿಗೆ ದೊಡ್ಡ ತಲೆನೋವಾಗಿದ್ದು, ಅಖಾಡ ಸಾಕಷ್ಟು ಕುತೂಹಲ ಮೂಡಿಸಿದ್ದು ಗೆಲುವಿನ ಮಾಲೆ ಯಾರಿಗೆ ಅನ್ನೋದನ್ನ ಮತದಾರ ಪ್ರಭು ನಿರ್ಧರಿಸಲಿದ್ದಾನೆ.
Advertisement
Advertisement
ಒಟ್ಟು ಮತದಾರರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18,79,659 ಮತದಾರರಿದ್ದಾರೆ. ಇದರಲ್ಲಿ 9,40,687 ಮಹಿಳಾ ಮತದಾರರು ಮತ್ತು 9,38,826 ಪುರುಷ ಮತದಾರರಿದ್ದಾರೆ. ಜಾತಿವಾರು ನೋಡೋದಾದರೆ ಒಕ್ಕಲಿಗರು 4 ಲಕ್ಷ, ಮುಸ್ಲಿಮರು 2.10 ಲಕ್ಷ, ಲಿಂಗಾಯತರು 2 ಲಕ್ಷ, ಕುರುಬರು 1.80 ಲಕ್ಷ, ಎಸ್ಸಿ (ಬಲಗೈ) 1.75 ಲಕ್ಷ, ಎಸ್ಸಿ (ಎಡಗೈ) 1.25 ಲಕ್ಷ, ಎಸ್‍ಟಿ 1.25 ಲಕ್ಷ, ಕೊಡವರು 1 ಲಕ್ಷ, ಅರೆ ಭಾಷೆ ಒಕ್ಕಲಿಗರು 1 ಲಕ್ಷ, ಬ್ರಾಹ್ಮಣರು 1.10 ಲಕ್ಷ ಮತ್ತು ಇತರೆ/ಹಿಂದುಳಿದ ವರ್ಗ 2.30 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
Advertisement
2014ರ ಫಲಿತಾಂಶ:
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 31,608 (2.72%) ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಗೆಲುವು ಕಂಡಿದ್ದರು. ಪ್ರತಾಪ್‍ಸಿಂಹ (ಬಿಜೆಪಿ) 5,03,908 (43.45%), ಹೆಚ್.ವಿಶ್ವನಾಥ್ (ಕಾಂಗ್ರೆಸ್) 4,72,300 (40.73%), ಚಂದ್ರಶೇಖರಯ್ಯ(ಜೆಡಿಎಸ್) 1,38,587(11.95%) ಮತಗಳನ್ನು ಪಡೆದುಕೊಂಡಿದ್ದರು.
ವಿಧಾನಸಭಾ ಎಲೆಕ್ಷನ್ ಫಲಿತಾಂಶ: 2018ರ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಮಡಿಕೇರಿ – ಅಪ್ಪಚ್ಚು ರಂಜನ್ (ಬಿಜೆಪಿ), ವಿರಾಜಪೇಟೆ – ಕೆ.ಜಿ.ಬೋಪಯ್ಯ (ಬಿಜೆಪಿ), ಕೃಷ್ಣರಾಜ – ಎಸ್.ಎ.ರಾಮದಾಸ್ (ಬಿಜೆಪಿ), ಚಾಮರಾಜ – ಎಲ್.ನಾಗೇಂದ್ರ (ಬಿಜೆಪಿ), ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ (ಜೆಡಿಎಸ್), ಹುಣಸೂರು – ಹೆಚ್.ವಿಶ್ವನಾಥ್ (ಜೆಡಿಎಸ್), ಪಿರಿಯಾಪಟ್ಟಣ – ಕೆ.ಮಹದೇವ್ (ಜೆಡಿಎಸ್) ಮತ್ತು ನರಸಿಂಹರಾಜ – ತನ್ವೀರ್ ಸೇಠ್ (ಕಾಂಗ್ರೆಸ್)
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಪ್ರತಾಪ್ ಸಿಂಹ- ಬಿಜೆಪಿ
ವಿಜಯಶಂಕರ್ – ಕಾಂಗ್ರೆಸ್
ಡಾ.ಬಿ.ಚಂದ್ರ- ಬಿಎಸ್‍ಪಿ
ಪ್ರತಾಪ್ ಸಿಂಹ
ಪ್ಲಸ್ ಪಾಯಿಂಟ್: ಮೈತ್ರಿ ಇದ್ದರೂ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಳ ಜಗಳ ಲಾಭವಾಗಬಹುದು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧ ತುಟಿ ಬಿಚ್ಚದೆ ಒಕ್ಕಲಿಗರಿಗೆ ಹತ್ತಿರವಾಗುತ್ತಿರೋದು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿದ್ದು ಗೆಲುವಿನ ಸಮೀಪ ತಲುಪಿಸುವಲ್ಲಿ ಸಹಾಯ ಮಾಡಬಲ್ಲದು. ಸಂಸದರ ಅನುದಾನ ಬಳಕೆಯಲ್ಲಿ ಮೊದಲಿಗ ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್. ಮೈಸೂರಿನಲ್ಲಿ ಸ್ವತಃ ಮೋದಿ ಪ್ರಚಾರ ಹೆಚ್ಚಿನ ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ.
ಮೈನಸ್ ಪಾಯಿಂಟ್: ಸಂಸದರು ಮತ್ತು ಕೆಲ ಸ್ಥಳೀಯ ಜನಪ್ರತಿನಿಧಿಗಳ ಸಂಬಂಧದಲ್ಲಿ ಬಿರುಕು ಹೊಡೆತ ನೀಡಬಹುದು. ಒಕ್ಕಲಿಗ ಸಮುದಾಯದ ಮತಗಳು ಈ ಬಾರಿ ಹಂಚಿ ಹೋಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಬಲಿಷ್ಠವಾಗಿರೋದು ಮತಗಳು ಮೈತ್ರಿ ಅಭ್ಯರ್ಥಿಯ ಪಾಲಾಗಬಹುದು. ಸಹಜವಾಗಿಯೇ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವಿಜಯಶಂಕರ್
ಪ್ಲಸ್ ಪಾಯಿಂಟ್: ಕೈ ಅಭ್ಯರ್ಥಿ ವಿಜಯಶಂಕರ್ ಬೆನ್ನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಲಿಷ್ಠವಾಗಿರೋದು ಮತಗಳ ಕ್ರೋಢಿಕರಣವಾಗುವ ಸಾಧ್ಯತೆಗಳಿವೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತ ಅನುಕಂಪದ ಅಲೆ ವರ್ಕ್‍ಔಟ್ ಆಗಬಹುದು. ದೇವೇಗೌಡ, ಕುಮಾರಸ್ವಾಮಿ ಅವರು ಬೆಂಬಲ ಕೊಡಿ ಅಂತಾ ಸಭೆ ನಡೆಸಿರೋದು. ಕ್ಷೇತ್ರದ ಸೋಲು ಗೆಲುವಿನ ಜಾಡುಗಳು ಬಗ್ಗೆ ಸೂಕ್ಷ್ಮತೆ ಗೊತ್ತಿರುವುದು.
ಮೈನಸ್ ಪಾಯಿಂಟ್: ಚಾಮುಂಡೇಶ್ವರಿ ಸೋಲಿನ ಕಹಿಯ ಒಳ ಗುದ್ದಾಟ ನಿಲ್ಲದಿರುವುದು. ಸ್ವತಃ ಪ್ರಧಾನಿ ಮೋದಿಯೇ ಮೈಸೂರಿಗೆ ಪ್ರಚಾರಕ್ಕೆ ಬಂದು ಅಬ್ಬರಿಸಿರೋದು. ನಗರ ಪ್ರದೇಶ, ಕೊಡಗು ಭಾಗದಲ್ಲಿ ಬಿಜೆಪಿ ಬಲವಾಗಿರುವುದು. ಕಾಂಗ್ರೆಸ್, ಜೆಡಿಎಸ್ ನಲ್ಲಿ ಹೊಂದಾಣಿಕೆ ಕೊರತೆ ಹೆಚ್ಚಿರುವುದು.