ಮೈಸೂರು: ಕಾಂಗ್ರೆಸ್ ತನ್ನ ಅವಧಿಯಲ್ಲಿ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 120 ಇದ್ದ ಸಂಖ್ಯಾಬಲ ಈ ಬಾರಿಯ ಚುನಾವಣೆಯಲ್ಲಿ ಏಕೆ 78ಕ್ಕೆ ಇಳಿಯಿತು ಎಂದು ಪ್ರಶ್ನೆ ಮಾಡುವ ಮೂಲಕ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲ ಕಾಂಗ್ರೆಸ್ ನಾಯಕರು ಚಮಚಾ ಗಿರಿ ಮಾಡುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ 5 ವರ್ಷ ತನ್ನ ಆಡಳಿತದಲ್ಲಿ ಏನ್ ಮಾಡಿದ್ದಾರೆ? ಒಳ್ಳೆಯ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿಯಲ್ಲಿ ಆಡಳಿತ ನಡೆಸಿದ್ದಾರ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ತನ್ನ ಅವಧಿಯಲ್ಲಿ ಆಡಳಿತ ಚೆನ್ನಾಗಿತ್ತು, ಐದು ವರ್ಷ ಪೂರೈಸಿದ ಸಿಎಂ ನಾನು ಎಂದು ಹೇಳುತ್ತಾರೆ. ಆಗದರೆ 130 ಇದ್ದ ಸಂಖ್ಯಾಬಲ 78ಕ್ಕೆ ಏಕೆ ಇಳಿಯಿತು? ಒಳ್ಳೆಯ ಅಡಳಿತ ನೀಡಿದ ಕಾಂಗ್ರೆಸ್ ಪಕ್ಷ ಏಕೆ ಅಧಿಕಾರ ಕಳೆದುಕೊಂಡಿತು. ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮತ್ತೆ ಸಿಎಂ ಆಗುತ್ತೇನೆ ಎಂದು ಹೇಳುತ್ತಾರೆ ಎಂದರು.
ಇದೇ ವೇಳೆ ಸ್ಥಳೀಯ ಚುನಾವಣೆಯ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಸ್ಥಳೀಯ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಸ್ಥಳೀಯ ಜೆಡಿಎಸ್ ನಾಯಕರಿಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಕುಮಾರಸ್ವಾಮಿ ಅವರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ವಿಧಾನಸೌದದ ಬಾಗಿಲು ಹಾಕಿಕೊಂಡು ಬಂದಿದ್ದಾರಾ?. ಮಂತ್ರಿಗಳಿದ್ದಾರೆ, ಅಧಿಕಾರಿಗಳಿದ್ದಾರೆ ಕಾಲ ಕಾಲಕ್ಕೆ ಸಿಎಂ ಸಲಹೆ ಸೂಚನೆ ಸಭೆ ಮಾಡುತ್ತಿದ್ದಾರೆ. ಆಡಳಿತ ಚೆನ್ನಾಗಿ ನಡೆಯುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿ ಎಲ್ಲೂ ಶೂನ್ಯ ವಾತಾವರಣ ಕ್ರಿಯೇಟ್ ಆಗಿಲ್ಲ. ಅವರಿಗೆ ಎಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆಯೋ ಅಲ್ಲಿಗೆ ಹೋಗೋದು ಕಾಮನ್ ಎಂದು ಸಮರ್ಥಿಸಿಕೊಂಡರು.