ಆತ್ಮೀಯ ಗೆಳೆಯನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ – ಸಿದ್ದು ಸಂತಾಪ

Public TV
1 Min Read
collage siddu

ಬೆಂಗಳೂರು: ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಎಂ. ಸತ್ಯನಾರಾಯಣ (75) ಗುರುವಾರ ರಾತ್ರಿ ವಿಧಿವಶರಾಗಿದ್ದಾರೆ. ಇದಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅತ್ಮೀಯ ಗೆಳೆಯನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯನಾರಾಯಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ದಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕರಾದ ಮುತ್ಸದ್ದಿ ರಾಜಕಾರಣಿ ಎಂ.ಸತ್ಯನಾರಾಯಣ ಅವರ ನಿಧನದಿಂದ ನಾನು ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮಾಜಿ ಶಾಸಕರಾದ ಸತ್ಯನಾರಾಯಣ ಅವರು ದೀರ್ಘಕಾಲದ ನನ್ನ ರಾಜಕೀಯ ಸಹಪಾಠಿ. 1977 ರಲ್ಲಿ ಇಬ್ಬರೂ ಏಕಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ್ದೆವು. ಬಹಳ ಸೌಮ್ಯ ಸ್ವಭಾವದ ಸರಳ-ಸಜ್ಜನ ರಾಜಕಾರಣಿ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿಯಷ್ಟೇ ಅಲ್ಲ ರಾಜ್ಯ ರಾಜಕಾರಣ ಹಾಗೂ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

2008ರಲ್ಲಿ ನಾನೇ ದೂರವಾಣಿ ಕರೆಮಾಡಿ ನೀವು ಚಾಮುಂಡೇಶ್ವರಿಯಿಂದ ಸ್ಪರ್ಧೆಮಾಡಿ ಎಂದು ಹೇಳಿ ಸತ್ಯಣ್ಣನವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆ. ಈ ಸಂದರ್ಭದಲ್ಲಿ ಅವರಿಗೆ ತಾವು ಚುನಾವಣೆಗೆ ಸ್ಪರ್ಧಿಸುತ್ತೇನೆಂದೆ ತಿಳಿದಿರಲಿಲ್ಲ. 5 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರಕ್ಕೆ ಸಾಕಷ್ಟು ದುಡಿದಿದ್ದರು. ಈಗವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ವಿಶ್ವನಾಥ್, ಸಚಿವರಾದ ಜಿ.ಟಿ.ದೇವೆಗೌಡ ಮತ್ತು ಪುಟ್ಟರಂಗಶೆಟ್ಟಿ ಅವರು ಸತ್ಯನಾರಾಯಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮೃತ ಸತ್ಯನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *