ವೀಕೆಂಡ್ ಮಸ್ತಿಯಲ್ಲಿ ದಚ್ಚು- ಕುದುರೆ ಏರಿ ಸವಾರಿ ಮಾಡಿದ ಸುಯೋಧನ

Public TV
1 Min Read
collage darshan 2

ಮೈಸೂರು: ವೀಕೆಂಡ್‍ನಲ್ಲಿ ಸ್ನೇಹಿತರ ಜೊತೆ ಮಸ್ತಿ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮಗೆ ಇಷ್ಟವಾದ ಕುದುರೆ  ಏರಿ ಸವಾರಿ ಮಾಡಿದ್ದಾರೆ.

ತಮ್ಮ ನಟನೆಯ ಕರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ಸುಯೋಧನ ದರ್ಶನ್, ಮೈಸೂರಿನ ತಮ್ಮ ಫಾರ್ಮ್ ಹೌಸಿನಲ್ಲಿ ವೀಕೆಂಡ್ ಮಸ್ತಿ ಮಾಡುತ್ತಿದ್ದಾರೆ. ಗೆಳೆಯರ ಜೊತೆ ಕುದುರೆ ಏರಿ ರಸ್ತೆಯಲ್ಲಿ ಓಡಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಅಗಿದೆ.

collage darshan

ವಿಡಿಯೋದಲ್ಲಿ ದಾಸ, ತಮಗೆ ಇಷ್ಟವಾದ ಬಿಳಿ ಕುದುರೆಯನ್ನು ರೈಡ್ ಮಾಡುತ್ತಿದ್ದಾರೆ. ಕುದುರೆಯ ಹಿಂದಕ್ಕೆ ಇನ್ನೊಂದು ಕಪ್ಪು ಬಣ್ಣದ ಕುದುರೆಯನ್ನು ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ದರ್ಶನ್ ಅವರ ಜೊತೆ ಅವರ ಇನ್ನಿಬ್ಬರು ಸ್ನೇಹಿತರು ಕೂಡ ಕುದುರೆ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನು ರಸ್ತೆಯಲ್ಲಿ ನಿಂತ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‍ನಲ್ಲಿ ಸೆರೆಹಿಡಿದ್ದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮುಂಚೆಯಿಂದಲೂ ಪ್ರಾಣಿ ಪ್ರಿಯ ಆಗಿರುವ ದರ್ಶನ್ ಅವರಿಗೆ ಕುದುರೆ ಎಂದರೆ ಅಚ್ಚುಮೆಚ್ಚು. ಆ ಕಾರಣದಿಂದಲೇ ಅವರು ಮೈಸೂರಿನ ಟಿ ನರಸೀಪುರದ ಬಳಿ ಇರುವ ಅವರ ಫಾರ್ಮ್ ಹೌಸ್‍ನಲ್ಲಿ ಕುದುರೆಗಳು, ಹಸುಗಳು ಮತ್ತು ಕೋಳಿ ಸೇರಿದಂತೆ ವಿವಿಧ ರೀತಿಯ ಪಕ್ಷಿಗಳನ್ನು ಸಾಕಿದ್ದಾರೆ.

ಇದರ ಜೊತೆ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನ ಪರಿಸರದ ಮೇಲೆ ಅತೀ ಹೆಚ್ಚು ಪ್ರೀತಿ ಹೊಂದಿದ್ದು, ಶೂಟಿಂಗ್‍ನಲ್ಲಿ ಬಿಡುವು ಸಿಕ್ಕ ಸಮಯದಲ್ಲಿ ಕಾಡಿನಲ್ಲಿ ಸಫಾರಿ ಹೋಗುವುದು, ಕಾಡಿನ ಫೋಟೋ ತೆಗೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಈ ಹಿಂದೆ ತಾವು ಸೆರೆ ಹಿಡಿದಿದ್ದ ಪ್ರಕೃತಿಯ ಅದ್ಭುತ ದೃಶ್ಯಗಳ ಫೋಟೋಗಳನ್ನು ಹರಾಜು ಹಾಕಿದ್ದರು. ಮಾರ್ಚ್ 3 ರಂದು ನಡೆದ ಈ ಹರಾಜಿನಲ್ಲಿ 3.75 ಲಕ್ಷ ರೂ. ಸಂಗ್ರಹಣೆಯಾಗಿತ್ತು. ಇದರಲ್ಲಿ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ಹೇಳಿದ್ದರು.

Share This Article