ಮೈಸೂರು: ಚಾಮುಂಡೇಶ್ವರಿ ದೇವಸ್ಥಾನದ ನೌಕರರು ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ನೌಕರರ ವೇತನ ಪರಿಷ್ಕರಣೆ ಆಗದಿದ್ದಲ್ಲಿ ಮುಂಬರುವ ಆಷಾಢ ಮಾಸದ ಕಾರ್ಯಕ್ರಮಗಳ ವೇಳೆ ಕೆಲಸ ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.
ಕೆಲಸಗಳನ್ನ ಸ್ಥಗಿತಗೊಳಿಸಿ ದೇವಸ್ಥಾನದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ. ಒಟ್ಟು 80 ನೌಕರರು ಇಂತಹ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದ 10 ವರ್ಷಗಳಿಂದ ವೇತನ ಹೆಚ್ಚಿಸುವಂತೆ ಮಾಡಿದ ಮನವಿಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಒಟ್ಟು 160 ನೌಕರರ ಪೈಕಿ 80 ನೌಕರರು ಕೇವಲ 5 ಸಾವಿರ ರೂಪಾಯಿ ಸಂಬಳದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 80 ನೌಕರರಿಗೆ ನೀಡುವ ವೇತನವನ್ನೇ ತಮಗೂ ನಿಗದಿ ಪಡಿಸುವಂತೆ ಒತ್ತಾಯಿಸಿದ್ದಾರೆ.
Advertisement
ಚಾಮುಂಡಿ ಬೆಟ್ಟದಲ್ಲಿ ಬರುವ ಆದಾಯದಲ್ಲಿ 35%ರಷ್ಟು ಹಣವನ್ನ ನಿರ್ವಹಣೆಗೆ ಬಳಸಿಕೊಳ್ಳುವಂತೆ ಸರ್ಕಾರದ ಆದೇಶವಿದ್ದರೂ ಪಾಲಿಸುತ್ತಿಲ್ಲ. ಶೀಘ್ರದಲ್ಲೇ ವೇತನ ಪರಿಷ್ಕರಣೆ ಬೇಡಿಕೆಯನ್ನ ಈಡೇರಿಸದಿದ್ದಲ್ಲಿ ಆಷಾಢ ಮಾಸದ ವೇಳೆ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಹಾಗೊಂದು ವೇಳೆ ನೌಕರರು ಕೆಲಸ ಸ್ಥಗಿತಗೊಳಿಸಿದ್ದಲ್ಲಿ ಆಷಾಢ ಶುಕ್ರವಾರಗಳಲ್ಲಿ ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನಾನುಕೂಲವಾಗುತ್ತದೆ.
Advertisement