ಮೈಸೂರು: ಸಿದ್ದರಾಮಯ್ಯ ನನ್ನ ತಂದೆ ಸಮಾನ. ಅವರು ಹೊಡೆದಿದ್ದು ನನಗೆ ಬೇಜಾರಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕಪಾಳಮೋಕ್ಷ ಮಾಡಿಸಿಕೊಂಡ ಬೆಂಬಲಿಗ ನಾಡನಹಳ್ಳಿ ರವಿ ಸ್ಪಷ್ಟನೆ ನೀಡಿದ್ದಾರೆ.
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ರವಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕೈ ಮುಖಂಡ ರವಿ, ತಮಾಷೆಗೆ ಅವರು ನನ್ನ ಕಪಾಳಕ್ಕೆ ಹೊಡೆದರು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯರನ್ನು ಪ್ರತಿಭಟನೆಗೆ ಆಹ್ವಾನಿಸಲು ಬಂದಿದ್ದೆ. ನಾನು ಕೇಳಿದ್ದಕ್ಕೆ ಬರೋಲ್ಲ ನೀವೇ ಪ್ರತಿಭಟನೆ ಮಾಡಿ ಅಂದರು. ಆದರೆ ಮರಿಗೌಡರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಕೊಡೋಕೆ ಹೇಳಿದ್ದರು. ಅದಕ್ಕೆ ಕೊಡೋಕೆ ಹೋದೆ. ಅದಕ್ಕೆ ತಮಾಷೆಗೆ ಅವರು ಕಪಾಳಕ್ಕೆ ಹೊಡೆದರು. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಸಿದ್ದರಾಮಯ್ಯ ಆಪ್ತ ಮತ್ತು ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಾಡನಹಳ್ಳಿ ರವಿ ಹೇಳಿದ್ದಾರೆ.
ನಡೆದಿದ್ದೇನು?
ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ವಾಪಸ್ ಹೋಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗ ಯಾರಿಗೋ ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದರು. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದುಕೊಂಡು ಹೋಗಿದ್ದರು. ಕೈ ಮುಖಂಡರ ಸಮ್ಮುಖದಲ್ಲೇ, ವಿಮಾನ ನಿಲ್ದಾಣದ ಆವರಣದಲ್ಲೇ ಬೆಂಬಲಿಗನ ಕೆನ್ನೆಗೆ ಸಿದ್ದರಾಮಯ್ಯ ಹೊಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.