ನೇಪಿಟಾವ್: ಮ್ಯಾನ್ಮಾರ್ (Myanmar Earthquake) ಮತ್ತು ಥಾಯ್ಲೆಂಡ್‌ನ (Thailand) ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಎರಡು ದೇಶಗಳನ್ನು ತೀವ್ರವಾಗಿ ಕಾಡಿದೆ. ಒಂದು ಕಡೆ ಅವಶೇಷಗಳ ಅಡಿಗಳಲ್ಲಿ ಸಿಲುಕಿರುವ ರಕ್ಷಣೆ ಮುಂದುವರಿದಿದ್ದು, ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಭೂಕಂಪನ ಬಗ್ಗೆ ಅಧ್ಯಯನಗಳು ನಡೆಯುತ್ತಿದ್ದು, ಮ್ಯಾನ್ಮಾರ್‌ನಲ್ಲಿ ಆದ ಕಂಪನದ ಬಗ್ಗೆ ವಿಜ್ಞಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಈ ಕಂಪನದ ಶಕ್ತಿಯನ್ನು 334 ಅಣುಬಾಂಬ್‌ಗಳಿಗೆ ಹೋಲಿಸಿದ್ದಾರೆ.
ಮೊನ್ನೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪವು ದೇಶದ ಮಧ್ಯಭಾಗವನ್ನು ನಾಶ ಮಾಡಿದೆ. ಕಟ್ಟಡಗಳು, ದೇವಸ್ಥಾನಗಳು ಸೇರಿ ಐತಿಹಾಸಿಕ ರಚನೆಗಳು ನೆಲಸಮವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಸಾವಿನ ಸಂಖ್ಯೆ 1,644ಕ್ಕೆ ಏರಿದ್ದು, 3,408ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಸೇನಾ ಸರ್ಕಾರ ದೃಢಪಡಿಸಿದೆ. ರಕ್ಷಣಾ ಕಾರ್ಯಚರಣೆ ಇನ್ನೂ ಮುಂದುವರಿದಿದ್ದು, ಈ ವಿನಾಶದ ಹೊಡೆತದಿಂದ ಹೊರ ತರಲು ಇನ್ನೂ ಸಾಕಷ್ಟು ಸಮಯ ಬೇಕಿದೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ
ಒಂದು ಕಡೆ ಸಾವುಗಳು ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದರೆ, ಮತ್ತೊಂದು ಕಡೆ ಈ ಪ್ರಬಲ ಭೂಕಂಪನದ ಬಗ್ಗೆ ಭೂಗರ್ಭಶಾಸ್ತ್ರದ ವಿಜ್ಞಾನಿಗಳು ಅಧ್ಯಯನ ಆರಂಭಿಸಿದ್ದಾರೆ. ಈ ನಡುವೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು 334 ಅಣುಬಾಂಬ್‌ಗಳ ಶಕ್ತಿಗೆ ಸಮಾನವಾಗಿದೆ ಎಂದು ಅಮೆರಿಕದ ಭೂವಿಜ್ಞಾನಿ ಜೆಸ್ ಫೀನಿಕ್ಸ್ ತಿಳಿಸಿದ್ದಾರೆ.
ಇದೇ ರೀತಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸಹ ಒಂದು ನಿರ್ಮಾಣ ಹಂತದ ಗಗನಚುಂಬಿ ಕಟ್ಟಡ ಕುಸಿದು 20 ಕ್ಕೂ ಅಧಿಕ ಮಂದಿ ಜನರು ಮೃತಪಟ್ಟಿದ್ದಾರೆ. ಭೂಕಂಪದ ನಂತರ 6.4 ತೀವ್ರತೆಯ ಪ್ರಬಲ ಆಫ್ಟರ್‌ಶಾಕ್ ಸೇರಿದಂತೆ ಹಲವಾರು ಸಣ್ಣ ಕಂಪನಗಳು ದಾಖಲಾಗಿವೆ. ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ, ಶುಕ್ರವಾರದಂದು 10 ಗಂಟೆಗಳ ಅವಧಿಯಲ್ಲಿ ಒಟ್ಟು 15 ಭೂಕಂಪಗಳು ಸಂಭವಿಸಿವೆ. ಈ ಆಫ್ಟರ್‌ಶಾಕ್‌ಗಳು ಮುಂದಿನ ಕೆಲವು ತಿಂಗಳ ವರೆಗೆ ಮುಂದುವರಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು
ಮ್ಯಾನ್ಮಾರ್‌ನ ಸೇನಾ ಸರ್ಕಾರವು ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ. ಇದು ಸಾಮಾನ್ಯವಾಗಿ ವಿದೇಶಿ ಸಹಾಯವನ್ನು ತಿರಸ್ಕರಿಸುವ ಮ್ಯಾನ್ಮಾರ್‌ನಿಂದ ಅಪರೂಪದ ಕ್ರಮವಾಗಿದೆ. ಭಾರತವು ತನ್ನ ನೆರೆಯ ರಾಷ್ಟ್ರಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದು, ‘ಆಪರೇಷನ್ ಬ್ರಹ್ಮ’ದಡಿ 15 ಟನ್‌ಗಳ ಸಹಾಯ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ C-130J ವಿಮಾನದ ಮೂಲಕ ಮ್ಯಾನ್ಮಾರ್‌ಗೆ ರವಾನಿಸಿದೆ. ಇದರಲ್ಲಿ ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಕಂಬಳಿಗಳು, ಆಹಾರ ಪೊಟ್ಟಣಗಳು, ವಾಟರ್ ಪ್ಯೂರಿಫೈಯರ್‌ಗಳು, ಸೌರ ದೀಪಗಳು ಮತ್ತು ವೈದ್ಯಕೀಯ ಸಾಮಗ್ರಿಗಳು ಸೇರಿವೆ. ಜೊತೆಗೆ, ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳಾದ INS ಸತ್ಪುರ ಮತ್ತು INS ಸಾವಿತ್ರಿ 40 ಟನ್‌ಗಳ ಸಹಾಯ ಸಾಮಗ್ರಿಗಳೊಂದಿಗೆ ಯಾಂಗೊನ್ ಬಂದರಿಗೆ ತೆರಳಿವೆ.
ಚೀನಾವು ತನ್ನ 37 ಸದಸ್ಯರ ರಕ್ಷಣಾ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಿದ್ದು, ಇದು ಅಂತಾರಾಷ್ಟ್ರೀಯ ರಕ್ಷಣಾ ಗುಂಪಾಗಿ ಮೊದಲಿಗೆ ಆಗಮಿಸಿದೆ. ಜೊತೆಗೆ, 100 ಮಿಲಿಯನ್ ಯುವಾನ್ (13 ಮಿಲಿಯನ್ ಡಾಲರ್) ಮೌಲ್ಯದ ಮಾನವೀಯ ಸಹಾಯವನ್ನು ಒದಗಿಸುವ ಭರವಸೆ ನೀಡಿದೆ. ರಷ್ಯಾ ಕೂಡಾ ರಕ್ಷಣಾ ತಂಡ ಕಳುಹಿಸಿದೆ. ಅಮೆರಿಕ ಕೂಡಾ ನೆರವಿನ ಭರವಸೆ ನೀಡಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ
USGS ಪ್ರಕಾರ, ಈ ಭೂಕಂಪದಿಂದ ಸಾವಿನ ಸಂಖ್ಯೆ 10,000 ದಾಟುವ ಸಂಭವನೀಯತೆ ಇದೆ ಎಂದು ಎಚ್ಚರಿಸಲಾಗಿದೆ. ಮ್ಯಾನ್ಮಾರ್‌ನ ಆಂತರಿಕ ಸಂಘರ್ಷ ಮತ್ತು ಸಂಪರ್ಕದ ಕೊರತೆಯಿಂದಾಗಿ ನಿಖರ ಮಾಹಿತಿ ಸಂಗ್ರಹಿಸುವುದು ಸವಾಲಾಗಿದೆ. ಇದೇ ವೇಳೆ, ವಿರೋಧಿ ಗುಂಪುಗಳಾದ ಪೀಪಲ್ಸ್ ಡಿಫೆನ್ಸ್ ಫೋರ್ಸ್ ರಕ್ಷಣಾ ಕಾರ್ಯಗಳಿಗೆ ಸಹಕಾರ ನೀಡಲು ಎರಡು ವಾರಗಳ ಕದನ ವಿರಾಮ ಘೋಷಿಸಿದೆ. ಈ ಭೂಕಂಪವು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ಗೆ ದೊಡ್ಡ ಆಘಾತವನ್ನುಂಟು ಮಾಡಿದ್ದು, ಅಂತಾರಾಷ್ಟ್ರೀಯ ಸಮುದಾಯವು ತುರ್ತು ಸಹಾಯಕ್ಕಾಗಿ ಒಗ್ಗಟ್ಟಾಗಿ ಪ್ರಯತ್ನಿಸುತ್ತಿದೆ.