ನೇಪಿಟಾವ್: ಮ್ಯಾನ್ಮಾರ್‌ನಲ್ಲಿ (Myanmar Earthquake) ಎರಡು ಪ್ರಬಲ ಭೂಕಂಪನ ಸಂಭವಿಸಿದೆ. ಭೂಕಂಪನದ ತೀವ್ರತೆ ಥ್ಯಾಯ್ಲೆಂಡ್‌ನ (Thailand) ಬ್ಯಾಂಕಾಕ್ ಮತ್ತು ಬಾಂಗ್ಲಾದೇಶದ ವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, 144 ಜನರು ಸಾವನ್ನಪ್ಪಿದ್ದಾರೆ. ಮನೆ ದೇವಸ್ಥಾನ ಸೇರಿದಂತೆ ನೂರಾರು ಕಟ್ಟಡಗಳು ಧರೆಗುರುಳಿದ್ದು, ಜನರ ಬದುಕು ಬೀದಿಗೆ ಬಂದಿದೆ.
11:50 ಸುಮಾರಿಗೆ 7.7 ಮತ್ತು 7.4 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ಭಾರಿ ಅನಾಹುತಗಳು ಸಂಭವಿಸಿವೆ. ಈ ಭೂಕಂಪದ ಕೇಂದ್ರಬಿಂದು ಸಗೈಂಗ್ ಪ್ರದೇಶದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿ, ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ ಇತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ತಿಳಿಸಿದೆ. ಇದನ್ನೂ ಓದಿ: Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ 60 ಸಾವು, 250 ಮಂದಿಗೆ ಗಾಯ
ಈ ಘಟನೆಯು ಮ್ಯಾನ್ಮಾರ್‌ನ ಜನಜೀವನವನ್ನು ಅಸ್ಥವ್ಯಸ್ಥ ಮಾಡಿದ್ದು, ಪಕ್ಕದ ರಾಷ್ಟ್ರಗಳಾದ ಭಾರತ, ಥೈಲ್ಯಾಂಡ್ ಮತ್ತು ಬಾಂಗ್ಲಾದೇಶದಲ್ಲೂ ತೀವ್ರ ಕಂಪನ ಅನುಭವವಾಗಿದೆ. ಮುಖ್ಯವಾಗಿ ಈ ಭೂಕಂಪವು ಮ್ಯಾನ್ಮಾರ್‌ನ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಭಾರೀ ವಿನಾಶವನ್ನು ಉಂಟುಮಾಡಿದೆ. ಸಗೈಂಗ್ ಪ್ರದೇಶದಲ್ಲಿ ಹಲವಾರು ಕಟ್ಟಡಗಳು ಕುಸಿದಿದ್ದು, ಇತಿಹಾಸ ಪ್ರಸಿದ್ಧ ಸಗೈಂಗ್ ಗುಡ್ಡದ ಸುತ್ತಮುತ್ತಲಿನ ದೇವಾಲಯಗಳಿಗೆ ಹಾನಿಯಾಗಿದೆ.
ಘಟನೆಯಲ್ಲಿ ಇದುವರೆಗೆ ಕನಿಷ್ಠ 144 ಜನರು ಸಾವನ್ನಪ್ಪಿದ್ದಾರೆ ಮತ್ತು 732 ಜನರು ಗಾಯಗೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಸರ್ಕಾರಿ ಸಂಸ್ಥೆಯು ಭೂಕಂಪದ ಶಕ್ತಿ ಮತ್ತು ಆಳವನ್ನು ವಿಶ್ಲೇಷಿಸಿದ ನಂತರ, ತೀವ್ರ ಆರ್ಥಿಕ ನಷ್ಟಗಳೊಂದಿಗೆ ಸಾವಿನ ಸಂಖ್ಯೆ ಸಾವಿರಾರು ಸಂಖ್ಯೆಯಲ್ಲಿರಬಹುದು ಎಂದು ಎಚ್ಚರಿಸಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದು ರಕ್ಷಣೆ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: Photo Gallary: ಮ್ಯಾನ್ಮಾರ್, ಥೈಲ್ಯಾಂಡ್‌ನಲ್ಲಿ ಡೆಡ್ಲಿ ಭೂಕಂಪ – ಭೀಕರ ದೃಶ್ಯಗಳನ್ನು ಫೋಟೊಗಳಲ್ಲಿ ನೋಡಿ..
ಭೂಕಂಪಕ್ಕೆ ಆದ ಅನಾಹುತಗಳೇನು?
* ಭೂಕಂಪದಿಂದಾಗಿ ಐದು ನಗರಗಳು ಮತ್ತು ಪಟ್ಟಣಗಳಲ್ಲಿ ಕಟ್ಟಡಗಳು ಕುಸಿದಿವೆ.
* ಯಾಂಗೂನ್-ಮಂಡಲೆ ಎಕ್ಸ್‌ಪ್ರೆಸ್‌ವೇಯಲ್ಲಿ ರೈಲ್ವೆ ಸೇತುವೆ ಮತ್ತು ರಸ್ತೆ ಸೇತುವೆ ಕೂಡ ಕುಸಿದು ಬಿದ್ದಿದೆ.
* ಪ್ರಬಲ ಭೂಕಂಪದ ನಂತರ ಮಂಡಲೆಯಲ್ಲಿರುವ 90 ವರ್ಷ ಹಳೆಯದಾದ ಅವಾ ಸೇತುವೆ ಇರಾವಡ್ಡಿ ನದಿಯಲ್ಲಿ ಕುಸಿದಿದೆ.
* ಐತಿಹಾಸಿಕ ಪ್ರಸಿದ್ಧವಾಗಿರುವ ಗಡಿಯಾರ ಗೋಪುರ ಮತ್ತು ಐತಿಹಾಸಿಕ ಮಂಡಲೆ ಅರಮನೆಯ ಹಾನಿಯಾಗಿದೆ.
* ಮ್ಯಾನ್ಮಾರ್‌ನಲ್ಲಿರುವ ದೊಡ್ಡ ಅಣೆಕಟ್ಟುಗಳ ಸ್ಥಿತಿಯ ಬಗ್ಗೆ ಮಾನವೀಯ ಸಂಸ್ಥೆ ರೆಡ್‌ಕ್ರಾಸ್ ಕಳವಳ ವ್ಯಕ್ತಪಡಿಸಿದೆ.
* ರಸ್ತೆಗಳು, ಸೇತುವೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.
* ಮ್ಯಾನ್ಮಾರ್‌ನ ಸಾಗೈಂಗ್, ಮಂಡಲೆ ಮತ್ತು ರಾಜಧಾನಿ ನೇಪಿಟಾವ್ ಸೇರಿದಂತೆ ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ.
ಯಾಂಗೊನ್‌ನಲ್ಲಿ ಕೂಡ ಕಂಪನದ ಪರಿಣಾಮವಾಗಿ ಜನರು ಭಯಭೀತರಾಗಿ ರಸ್ತೆಗಳಿಗಿಳಿದಿದ್ದಾರೆ. ಮ್ಯಾನ್ಮಾರ್ ಸರ್ಕಾರವು ತುರ್ತು ಪರಿಸ್ಥಿತಿ ಘೋಷಿಸಿ, ಸೇನೆ ಮತ್ತು ಸ್ಥಳೀಯ ರಕ್ಷಣಾ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಭಗ್ನಾವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಆದರೆ, ರಸ್ತೆ ಸಂಪರ್ಕ ಕಡಿತ ಮತ್ತು ಸಂವಹನ ವ್ಯವಸ್ಥೆಯ ವೈಫಲ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಸವಾಲು ಎದುರಾಗಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಔಷಧಿ ಮತ್ತು ಆಹಾರ ಸಾಮಗ್ರಿಗಳ ಕೊರತೆಯಾಗಿದೆ. ಇದನ್ನೂ ಓದಿ: ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ