ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಕ್ಷೇತ್ರ, ಚಾರಣಿಗರ ಸ್ವರ್ಗ, ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಕಾರ್ಯಕ್ರಮ ಅನುಷ್ಠಾನಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಟಿ ಸಿದ್ದರಾಜು ಆಯ್ಕೆಯಾಗಿದ್ದಾರೆ ಎಂದು ಉಪತಹಶೀಲ್ದಾರ್ ಜುಂಜೇಗೌಡ ಘೋಷಣೆ ಮಾಡಿದರು.
ಶಿವಗಂಗೆ ಬೆಟ್ಟದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ದಾಸೋಹ ಭವನದ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ರೇಣುಕೇಶ್ವರ್ ಸ್ವ ನಿರ್ಧಾರದಿಂದ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಸಭೆಯ ಒಮ್ಮತ ತೀರ್ಮಾನದಂತೆ ಸಿದ್ದರಾಜುರನ್ನು ಆಯ್ಕೆ ಮಾಡಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಸಿದ್ದರಾಜು, ಮೂರು ವರ್ಷಗಳ ಅವಧಿಗೆ, ಮೂರು ಜನರ ಮಧ್ಯೆ ಹೊಂದಾಣಿಕೆ ಸೂತ್ರವನ್ನು ಅನುಸರಿಸಿ ಇಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ. ಶ್ರೀಗಂಗಾಧರೇಶ್ವರ ಸ್ವಾಮಿ ಗಿರಿಜಾ ಕಲ್ಯಾಣೋತ್ಸವಕ್ಕೆ ಇನ್ನೂ 15 ದಿನಗಳು ಬಾಕಿ ಉಳಿದಿರುವ ದಿನದಲ್ಲಿ, ದಾಸೋಹ ವ್ಯವಸ್ಥೆ, ಮೆಟ್ಟಿಲು ನಿರ್ಮಾಣ, ಜೊತೆಗೆ ದೇವಾಲಯದ ಆಡಳಿತ ಮಂಡಳಿಯಲ್ಲಿರುವ 11 ಲಕ್ಷ ಹಿಂಡಿಗಂಟ್ಟು ಹಾಗೂ 25 ಲಕ್ಷ ಸಾಲದ ಮೊತ್ತದ ನಿಯಂತ್ರಣ, ಆದಾಯ ಮೂಲ ಹೆಚ್ಚಿಸುವುದು ಮತ್ತು ವಿವಿಧ ಸಂಘಸಂಸ್ಥೆ ಹಾಗೂ ಅರಣ್ಯ ಇಲಾಖೆ ನೆಟ್ಟಿರುವ ಗಿಡಗಳ ಪೋಷಣೆ ಹಾಗೂ ಸ್ವಚ್ಚತೆ ಬಗ್ಗೆ ಗಮನ ಹರಿಸುವೇ, ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ ಎಂದರು.
ಈ ವೇಳೆಯಲ್ಲಿ ದೇವಾಲಯದ ಸಿಇಓ ಚಂದ್ರಶೇಖರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತರಾಯಪ್ಪ, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಬರಗೇನಹಳ್ಳಿ ರಾಜಣ್ಣ, ಶಿವರಾಂ, ಯಡಿಯೂರಾಪ್ಪ, ರಾಜು ದೀಕ್ಷಿತ್, ಮಂಗಳಾ, ಸಿದ್ದಗಂಗಮ್ಮ, ರೇಣುಕೇಶ್ವರ್, ಮುಖಂಡರಾದ ಆಂಜನಮೂರ್ತಿ, ದಿನೇಶ್, ನಟರಾಜು, ರೇಣುಕಪ್ರಸಾದ್, ಇನ್ನೀತರರಿದ್ದರು.