ಅವಳ ನೆನಪೇ ಹಾಗೇ….. ಒಬ್ಬಂಟಿಯಾಗಿದ್ದಾಗ ನನ್ನನ್ನು ಸಾವಿರಾರು ಮಂದಿಯ ಮಧ್ಯೆ ನಿಲ್ಲಿಸಿ ಬಿಡುತ್ತದೆ. ಕೆಲವೊಮ್ಮೆ ಸಾವಿರಾರು ಜನರ ನಡುವೆಯೂ ಒಬ್ಬಂಟಿಯನ್ನಾಗಿಸಿ ಬಿಡುತ್ತದೆ..! ಅಂತಹ ದಿವ್ಯ ಅಮಲಿನ ಶಕ್ತಿ ಅವಳ ಕಿರು ನೋಟಕ್ಕೆ, ಕಿರು ನೋಟದ ನೆನಪಿಗಿದೆ..!
ಕೆಲವೊಮ್ಮೆ ದಾರಿಯ ತಿರುವಲ್ಲಿ, ಎಲ್ಲೋ ಕಣ್ಣಿಗೆ ಬೀಳುವ ಬೇಲಿಯ ಹೂವಲ್ಲಿ, ಹಾಗೆ ತಂಗಾಳಿಯಲ್ಲಿ ತೇಲಿ ಬರುವ ಸಣ್ಣ ಹಕ್ಕಿಯ ದ್ವನಿಯಲ್ಲಿ, ಯಾವುದೋ ಹಳೆಯ ಹಾಡಿನ ಸಾಲಲ್ಲಿ…. ಹೀಗೆ ಅವಳ ನೆನಪು ನನಗೆ ಸಿಗದಿರುವ ಪಟ್ಟಿ ಮಾಡಲು ಸಾಧ್ಯವಿಲ್ಲವೇನೋ? ಯಾರು ಇರದ ದಾರಿಯಲ್ಲಿ ಹಾಗೇ ಬೇಟೆಯಾಡುವ ನಿನ್ನ ಕಣ್ಣಿನ ಬಾಣ ನನ್ನನ್ನು ಸದಾ ಅಟ್ಟಾಡಿಸುತ್ತದೆ.
ಈ ನೆನಪುಗಳ ರಾಶಿಯನ್ನು ಇಟ್ಟುಕೊಂಡೇ ಮೊನ್ನೆ ಪ್ರೇಮಿಗಳ ದಿನ ಅವಳನ್ನು ಮೊದಲು ನೋಡಿದ್ದನ್ನು ನೆನಪಿಸಿಕೊಂಡಿದ್ದೆ. ಅದೇ ಸಂಬಂಧ ಒಂದಷ್ಟು ಗೀಚಿ, ಪ್ರಕಟಿಸಿದ್ದೆ. ಆ ಬರಹ ಅವಳ ಹೃದಯಕ್ಕೆ ತಲುಪಿದೆ! ಮತ್ತೆ ನಮ್ಮಿಬ್ಬರನ್ನು ಮಾತಾಡುವಂತೆ ಮಾಡಿದೆ! ಬರಹದ ಮೇಲಿದ್ದ ನನ್ನ ಹೆಸರನ್ನ ನೋಡಿ ಅವಳು ಕರೆ ಮಾಡಿ ಮಾತಾಡಿದ್ದು, ನನ್ನ ಜೊತೆ ಮಾತಾಡಲು ವರ್ಷಗಳಿಂದ ಅವಳು ಪಟ್ಟ ಪಾಡನ್ನು ಹೇಳಿದ್ಲು.
ಇನ್ನೂ ನನ್ನೊಳಗೆ ಆಕೆಯನ್ನು ಉಳಿಸಿಕೊಂಡಿದ್ದಕ್ಕೆ ಇದೊಂದು ಪುಟ್ಟ ಉಡುಗೊರೆ ಎಂದೇ ನಾನು ಭಾವಿಸುತ್ತೇನೆ!
ಬ್ರೇಕಪ್ ಮಾಡ್ಕೊಂಡು ದೂರ ಆದವಳು ಅವಳು, ನನ್ನ ನೆನಪು ಮತ್ತೆ ಸುಳಿಯಬಾರದು ಎಂದು ನಂಬರ್‌ನ್ನೇ ಬದಲಿಸಿ, ತನ್ನ ಬದುಕಿಗೆ ಹೊಸ ʻರೂಪʼಕೊಟ್ಟುಕೊಂಡವಳು. ಆದರೆ ನಾಲ್ಕೇ ನಾಲ್ಕು ಸಾಲು ಓದಿ, ಐದಾರು ವರ್ಷಗಳ ಬಳಿಕ ನನ್ನ ನಂಬರ್ ನೆನಪಿಸಿಕೊಂಡು ಕರೆ ಮಾಡಿದ್ಲು! ಆ ಮಾತು ಇನ್ನೂ ಕಿವಿಯಲ್ಲೇ ಇದೇ! ಯಾಕೋ ಮರೆತಿಲ್ವ ನನ್ನ? ನಾನೇ ಕಾಲ್ ಮಾಡ್ಬೇಕಿತ್ತಾ? ನಿನಗೆ ಮಾತಾಡ್ಬೇಕು ಅಂತ ಅನ್ನಿಸ್ಲೇ ಇಲ್ವಾ? ಹೀಗೆ ಹೃದಯದ ಕುಂಡಗಳಲ್ಲಿ ಹೂಗಳನ್ನು ಜೋಡಿಸುವ ಅವಳ ಮಾತುಗಳಿಗೆ ಲೆಕ್ಕವೇ ಇಲ್ಲ..!
ಆದ್ರೂ ಒಂದು ಮಾತು ಹೇಳಿದ್ಲು ನಾನು ಫೋನ್ ಮಾಡ್ಬಾರದಿತ್ತಾ? ತೊಂದ್ರೆ ಕೊಡ್ತಾ ಇದಿನಾ? ನನ್ನ ಉತ್ತರ ಇಷ್ಟೇ ಎಷ್ಟಾದ್ರೂ ಕಿರಿಕಿರಿ ಮಾಡು… ನಿನಗೆ ಫುಲ್ ಪರ್ಮೀಷನ್! ಈ ಮಾತು ಹೇಳುವಷ್ಟರ ಮಟ್ಟಿಗೆ ಅವಳು ಇಷ್ಟ! ಅಷ್ಟು ಮಾತ್ರ!
ಸದಾ ನಿನ್ನ ಒಲವಿಗಾಗಿ ಹಂಬಲಿಸುವ
– ಗೋಪಾಲಕೃಷ್ಣ