ಬೆಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಮಾರ್ ಎಂಬಾತನೇ ಪತ್ನಿಯನ್ನ ಮನೆಯಿಂದ ಹೊರಹಾಕಿದ ಪತಿರಾಯ. 2016 ಏಪ್ರಿಲ್ ನಲ್ಲಿ ದೇವಿ (ಹೆಸರು ಬದಲಾಯಿಸಲಾಗಿದೆ) ಎಂಬವರ ಜೊತೆ ಕುಮಾರ್ ಆಗಿತ್ತು. ಆದ್ರೆ ಮದುವೆಯಾದ ಕೆಲ ತಿಂಗಳ ನಂತರ ಕುಮಾರ್ ಒಡವೆ, ಸೈಟ್‍ಗಾಗಿ ಬೇಡಿಕೆ ಇಟ್ಟು ಪ್ರತಿನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇತ್ತ ಪತ್ನಿ ಗರ್ಭಿಣಿ ಆಗುತ್ತಿದ್ದಂತೆ ಕುಮಾರ್ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದನು.
2017 ಏಪ್ರಿಲ್ ನಲ್ಲಿ ದೇವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಕುಮಾರ್ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ದೇವಿ ಮತ್ತು ಕುಟುಂಬಸ್ಥರು ಎಷ್ಟೇ ಬೇಡಿಕೊಂಡ್ರು ಕುಮಾರ್ ಪತ್ನಿಯನ್ನು ಮನೆಗೆ ಸೇರಿಸಿಕೊಂಡಿಲ್ಲ.
ದೇವಿ ಪೋಷಕರು 3 ಲಕ್ಷ ನಗದು ಮತ್ತು 150 ಗ್ರಾಂ ಒಡವೆಯನ್ನು ವರದಕ್ಷಿಣೆಯಾಗಿ ನೀಡಿ ಮಗಳ ಮದುವೆ ಮಾಡಿಕೊಟ್ಟಿದ್ದರು. ಆದ್ರೂ ದುರಾಸೆಯ ಪತಿ ಕುಮಾರ್ ಮತ್ತಷ್ಟು ಒಡವೆ ಮತ್ತು ಸೈಟ್ ಗಾಗಿ ಬೇಡಿಕೆ ಇಟ್ಟು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಅಂತಾ ದೇವಿ ಆರೋಪಿಸುತ್ತಿದ್ದಾರೆ.
ಪತಿಯ ವರ್ತನೆಯಿಂದ ಬೇಸತ್ತ ದೇವಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.