ನವದೆಹಲಿ: ದೇಶದಲ್ಲಿ ಇಂಡಿಗೋ ವಿಮಾನಗಳ (IndiGo Flight) ಸಂಚಾರ ಸ್ಥಗಿತದಿಂದಾಗಿ ಕೋಲಾಹಲವೇ ಎದ್ದಿದೆ. ಕೇವಲ 4 ದಿನಗಳಲ್ಲಿ 1300ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ. ಇದು 20 ವರ್ಷಗಳಲ್ಲೇ ಅತ್ಯಂತ ಕಠಿಣಕರ ಪರಿಸ್ಥಿತಿ ಆಗಿದೆ.
ದಿನಕ್ಕೆ ಬರೊಬ್ಬರಿ 2,200 ಹಾರಾಟವನ್ನು ಇಂಡಿಗೋ ನಡೆಸಲಿದ್ದು, ಇದರಲ್ಲಿ ಕೇವಲ 10% ರಷ್ಟು ಏರುಪೇರಾದರೆ 400-500 ವಿಮಾನಗಳ ಮೇಲೆ ಪರಿಣಾಮ ಬೀರಿ ಸಾವಿರಾರು ಪ್ರಯಾಣಿಕರು ಒದ್ದಾಡುವಂತಾಗುತ್ತೆ. ಇಡೀ ದೇಶಾದ್ಯಂತ ಇವತ್ತು ವಿಮಾನ ಸಂಚಾರದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್ (Sanitary Pad) ಬೇಕಿದೆ. ಈಗ ಬೇಕು ಕೊಡಿ ಅಂತ ತಂದೆಯೊಬ್ಬರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರೋ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA
ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ರೈಲ್ವೆ ಸ್ಟೇಷನ್‍ಗಿಂತ ಕಡೆಯಾಗಿ ಹೋಗಿತ್ತು. ಲಗೇಜ್, ಸೂಟ್ ಕೇಸ್‍ಗಳ ರಾಶಿ ಸಾಮಾನ್ಯವಾಗಬಿಟ್ಟಿವೆ. ಎಲ್ಲಿ ನೋಡಿದ್ರೂ ಜನವೋ ಜನ. ವಿಮಾನಗಳ ಸಂಚಾರ ಸ್ಥಗಿತ, ವೇಳಾಪಟ್ಟಿ ಬದಲಿನಿಂದ ಸುಮಾರು 12 ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರು, ಅನ್ನಾಹಾರ, ನಿದ್ರೆ ಇಲ್ಲದೆ ಕಾದು ಕಾದು ಸುಸ್ತಾಗಿದ್ದಾರೆ. ವಿಮಾನಯಾನ ಸಂಸ್ಥೆಗೆ ಪ್ರಯಾಣಿಕರು ಹಿಡಿಶಾಪ ಹಾಕ್ತಿದ್ದಾರೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು – ಫೆಬ್ರವರಿ ವೇಳೆಗೆ ಸಮಸ್ಯೆಗೆ ಪರಿಹಾರ ಎಂದ ಇಂಡಿಗೋ

