ಬೆಂಗಳೂರು: ರಾಜ್ಯ ಸರ್ಕಾರ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಈ ವರ್ಷದಿಂದ ಅನುಷ್ಠಾನವಾಗಲಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ರಾಜ್ಯದ ‘ಎ’ ದರ್ಜೆಯ ದೇವಸ್ಥಾನಗಳಿಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭೇಟಿ ನೀಡುತ್ತಿದ್ದಾರೆ.
ಸರ್ಕಾರದಿಂದ ಆಯ್ಕೆ ಮಾಡಿರುವ 100 ದೇವಾಲಯಗಳಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಈಗಾಗೀ ಸಚಿವರು ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ, ನಿನ್ನೆ ಚಿಕ್ಕಬಳ್ಳಾಪುರದ ಸುಬ್ರಮಣ್ಯ ದೇವಸ್ಥಾನ, ಮಂಗಳೂರಿನ ಮಂಗಳಾ ದೇವಿ ದೇವಸ್ಥಾನ ಮತ್ತು ಘಾಟಿ ಸುಬ್ರಮಣ್ಯ ದೇವಸ್ಥಾನಗಳಿಗೆ ಸೇರಿದಂತೆ ‘ಎ’ ದರ್ಜೆಯ ದೇವಸ್ಥಾನಗಳಿಗೆ ಭೇಟಿ ನೀಡಿ ಸಕಲ ಸಿದ್ಧತೆ ಮಾಡಿಕೊಳ್ಳಲು ಸಚಿವರು ಸಲಹೆ ನೀಡಿದ್ದಾರೆ.
ಮುಜರಾಯಿ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ವರನಿಗೆ ಪಂಚೆ-ಶರ್ಟ್ ಹಾಗೂ ಶಲ್ಯ ನೀಡಲಾಗುತ್ತದೆ. ವಧುವಿಗೆ ಧಾರೆ ಸೀರೆ, ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು ನೀಡಲಾಗುತ್ತದೆ.
ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಈಗಾಗಲೇ ಮುಜರಾಯಿ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಸಾಮೂಹಿಕ ವಿವಾಹ ಕುರಿತು ದೇವಸ್ಥಾನಗಳಿಗೆ ಭೇಟಿ ಚರ್ಚೆ ನಡೆಸುತ್ತಿದ್ದಾರೆ.