ಚಾಮರಾಜನಗರ: ದೇಶದ ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ತ್ಯಾಗ ಬಲಿದಾನಗೈದ ಪೊಲೀಸರನ್ನ ಪ್ರತಿವರ್ಷ ಸ್ಮರಿಸಿ ಗೌರವ ಸಲ್ಲಿಸಲಾಗುತ್ತದೆ. ಇದಕ್ಕಾಗಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (Muttiah Muralitharan) ಚಾಮರಾಜನಗರದಲ್ಲಿ ರಾಜ್ಯದಲ್ಲಿಯೇ ಅತಿ ಎತ್ತರದ ಸ್ಮಾರಕ (Police Martyrs Memorial) ನಿರ್ಮಿಸಿಕೊಡುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸಿದ್ದಾರೆ.
ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈ ಸ್ಪಿನ್ ಮಾಂತ್ರಿಕ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಬಳಿಕ ಶ್ರೀಲಂಕಾದಲ್ಲಿ (Sri Lanka) ಸಿಲೋನ್ ಬೇವರೆಜಸ್ ಕ್ಯಾನ್ ಕಂಪನಿ ಮೂಲಕ ತಂಪು ಪಾನೀಯ ಮತ್ತು ಎನರ್ಜಿ ಡ್ರಿಂಕ್ ಉತ್ಪಾದನಾ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.
ಶ್ರೀಲಂಕಾದ ಯಶಸ್ಸಿನ ಬಳಿಕ ಕರ್ನಾಟಕದಲ್ಲಿ ತಮ್ಮ ಉದ್ದಿಮೆಯ 2ನೇ ಇನ್ನಿಂಗ್ಸ್ ಆರಂಭಿಸಿರುವ ಮುತ್ತಯ್ಯ ಮುರಳೀಧರನ್ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆ ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ 400 ಕೋಟಿ ವೆಚ್ಚದಲ್ಲಿ ಮುತ್ತಯ್ಯ ಬೇವರೇಜ್ ಅಂಡ್ ಕನ್ಫೆಕ್ಷನರಿ ಪ್ರೈವೆಟ್ ಲಿಮಿಟೆಡ್ ಎಂಬ ತಂಪುಪಾನೀಯ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಇದೀಗ ರಾಜ್ಯದಲ್ಲೇ ಅತಿ ಎತ್ತರದ ಅಂದರೆ ಸುಮಾರು 27 ಅಡಿಯ ಪೊಲೀಸ್ ಸ್ಮಾರಕ ನಿರ್ಮಿಸಿಕೊಡುವ ಮೂಲಕ ಹುತಾತ್ಮ ಪೊಲೀಸ್ ಸ್ಮರಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಉತ್ಕೃಷ್ಟ ದರ್ಜೆಯ ಬ್ಲಾಕ್ ಗ್ರಾನೈಟ್‌ನಲ್ಲಿ ಈ ಪೊಲೀಸ್ ಸ್ಮಾರಕ ನಿರ್ಮಿಸಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಗರದ ಡಿಎಆರ್ ಗ್ರೌಂಡ್‌ನಲ್ಲಿ ಈ ಸುಂದರ ಸ್ಮಾರಕ ನಿರ್ಮಿಸಲಾಗಿದೆ. ಈ ವರ್ಷ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಈ ಸ್ಮಾರಕಕ್ಕೆ ಜಿಲ್ಲಾ ನ್ಯಾಯಾಧೀಶರಾದ ಪ್ರಭಾವತಿ ಪುಷ್ಪಗುಚ್ಚವಿರಿಸಿ ಹುತಾತ್ಮ ಪೋಲಿಸರಿಗೆ ಗೌರವ ಸಲ್ಲಿಸುವ ಮೂಲಕ ಸ್ಮಾರಕ ಲೋಕಾರ್ಪಣೆಗೊಳಿಸಿದರು.
ಒಟ್ಟಿನಲ್ಲಿ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಸದ್ದಿಲ್ಲದೆ ರಾಜ್ಯದಲ್ಲಿ ನೂರಾರು ಉದ್ಯೋಗ ಸೃಷ್ಟಿಸಿರುವುದಲ್ಲದೇ ಸಮಾಜ ಸೇವೆಗೂ ತಮ್ಮ ಸಹಾಯ ಹಸ್ತ ಚಾಚಿರುವುದು ಪ್ರಶಂಸನೀಯವಾಗಿದೆ.