ಧಾರವಾಡ: ಸಾಮಾನ್ಯವಾಗಿ ಕ್ರಿಕೆಟಿಗರು (Cricketer) ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಮೇಲೆ ಕೋಚ್ ಇಲ್ಲವೇ ಬೇರೆ ಬೇರೆ ಜವಾಬ್ದಾರಿಗಳನ್ನು ವಹಿಸಿಕೊಂಡು ಕ್ರಿಕೆಟ್‌ಗಾಗಿಯೇ ಜೀವನ ಮುಡಿಪಾಗಿ ಇಡುತ್ತಾರೆ. ಆದರೆ ಕೆಲವರು ಮಾತ್ರ ಬೇರೆ ಬೇರೆ ಕ್ಷೇತ್ರಗಳ ಕಡೆ ಹೋಗುತ್ತಾರೆ. ಅಂತವರಲ್ಲಿ ಶ್ರೀಲಂಕಾದ (Sri Lanka) ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ (Muttiah Muralitharan) ಕೂಡಾ ಒಬ್ಬರು.
ಇವರು ಇಡೀ ವಿಶ್ವವನ್ನೇ ಬೆರಗು ಮಾಡಿದಂತ ಸ್ಪಿನ್ ಮಾಂತ್ರಿಕ. ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಪಡೆದರೆ, ಏಕ ದಿನ ಕ್ರಿಕೆಟ್‌ನಲ್ಲಿ 536 ವಿಕೆಟ್ ಪಡೆದವರು. ಮುತ್ತಯ್ಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಬಳಿಕ ಶ್ರೀಲಂಕಾದಲ್ಲಿ ಸಿಲೋನ್ ಬೇವರೆಜಸ್ ಕ್ಯಾನ್ ಕಂಪನಿ ಮೂಲಕ ತಂಪು ಪಾನೀಯ ಮತ್ತು ಎನರ್ಜಿ ಡ್ರಿಂಕ್ ಉತ್ಪಾದನಾ ಉದ್ಯಮಕ್ಕೆ ಕೈ ಹಾಕಿ ಯಶಸ್ವಿಯಾದವರು. ಅವರೇ ಈಗ ಧಾರವಾಡದಲ್ಲಿ (Dharwad) ತಮ್ಮದೇ ತಂಪು ಪಾನೀಯ ಉದ್ಯಮ ಆರಂಭಿಸುವುದಕ್ಕೆ ಮುಂದಾಗಿದ್ದಾರೆ.
ಹೌದು, ತಮ್ಮ ಉದ್ಯಮಕ್ಕಾಗಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಬಳಿಯ ಕೈಗಾರಿಕಾ ಜಮೀನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ವಾರವಷ್ಟೇ ಮುಮ್ಮಿಗಟ್ಟಿಗೆ ಬಂದು ಸ್ಥಳವನ್ನೂ ನೋಡಿಕೊಂಡು ಹೋಗಿದ್ದಾರೆ. ಈ ಕೈಗಾರಿಕೆ ಸ್ಥಾಪನೆಗೆ ಎಫ್‌ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ ಸುಮಾರು 900 ಕೋಟಿ ರೂ. ಹೂಡಿಕೆ ಮಾಡಲು ಮುರಳೀಧರನ್ ಸಿದ್ಧರಾಗಿದ್ದು, ಮೊದಲ ಹಂತದಲ್ಲಿ 256.30 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಮೂಲಕ 200 ಜನರಿಗೆ ಇಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದನ್ನೂ ಓದಿ: ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು
ಮೊದಲ ಹಂತದಲ್ಲಿ ಮುತ್ತಯ್ಯಗೆ ಕೆಐಎಡಿಬಿ 15 ಎಕರೆ ಭೂಮಿ ಒದಗಿಸಲಾಗುತ್ತಿದ್ದು, ಒಟ್ಟು 3 ಹಂತಗಳಲ್ಲಿ ಉದ್ಯಮ ವಿಸ್ತರಿಸಲು ಕಂಪನಿ ಯೋಜಿಸಿದೆ. ಇದಕ್ಕಾಗಿ 32 ರಿಂದ 36 ಎಕರೆ ಭೂಮಿಗೆ ಬೇಡಿಕೆ ಸಲ್ಲಿಸಿದ್ದಾರೆ. ಮುರಳೀಧರನ್ ಆಗಸ್ಟ್ 5 ರಂದು ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಜಮೀನು ಪರಿಶೀಲಿಸಿದ್ದಾರೆ. ಸರ್ಕಾರದ ಹಂತದಲ್ಲಿ ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಮುಂಬರುವ 2-3 ವರ್ಷದಲ್ಲಿ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಉದ್ಯಮ ಕ್ಷೇತ್ರದಲ್ಲಿ ಧಾರವಾಡ ತನ್ನದೆಯಾದ ಛಾಪು ಮೂಡಿಸಿದ್ದು, ಅದೇ ಕಾರಣಕ್ಕೆ ಈಗ ದೂರದ ಶ್ರೀಲಂಕಾದಿಂದ ಮುತ್ತಯ್ಯ ಮುರಳೀಧರನ್ ಧಾರವಾಡಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪೇಸಿಎಂಗೆ ಬಿಜೆಪಿ ಪೇಸಿಎಸ್ ತಿರುಗೇಟು- ಚಲುವರಾಯಸ್ವಾಮಿ ವಿರುದ್ಧ ಕ್ಯೂಆರ್ ಕೋಡ್
Web Stories