ನನಗೆ ಮಿನಿಸ್ಟರ್ ಪೋಸ್ಟ್ ಬೇಕೇ ಬೇಕು – ಶಾಸಕ ಸುಬ್ಬಾರೆಡ್ಡಿ ಡಿಮ್ಯಾಂಡ್!

Public TV
1 Min Read
MLA Subba reddy

– ಆಪರೇಷನ್‌ ಕಮಲದ ವೇಳೆ ಸಚಿವ ಸ್ಥಾನ ಆಫರ್‌ ಬಂದಿತ್ತು ಎಂದ ಶಾಸಕ
– ಪವರ್ ಶೇರಿಂಗ್ ವಿಚಾರ ಹೈಕಮಾಂಡ್ ಗುಪ್ತವಾಗಿಟ್ಟಿದೆ

ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಕೇಳುವ ಹಕ್ಕಿದೆ, ನಾನು ಹಿರಿಯ ಶಾಸಕ, ಮುಂದಿನ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಡಿಮ್ಯಾಂಡ್ ಮಾಡ್ತಿದ್ದೇನೆ ಅಂತ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ (SN Subba Reddy) ಹೇಳಿದರು.

MLA Subba reddy 2

ಬಾಗೇಪಲ್ಲಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಯೋಜನೆಯ ಸಿದ್ಧತೆಗಳನ್ನ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಎಲ್ಲಾ ಕ್ಷೇತ್ರದವರೂ ಸಚಿವರಾಗಿದ್ದಾರೆ. ಆದ್ರೆ ಇದುವರೆಗೂ ಬಾಗೇಪಲ್ಲಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅದರಲ್ಲೂ ಬಿಜೆಪಿ ಅಪರೇಷನ್ ಕಮಲದ ವೇಳೆ ನನಗೆ ಸಚಿವ ಸ್ಥಾನದ ಆಫರ್ ಕೊಟ್ಟರು. ಆದ್ರೂ ನಾನು ಕಾಂಗ್ರೆಸ್ ಪಕ್ಷಕ್ಕೆ (Congress Party) ನಿಷ್ಟೆಯಿಂದ ಇದ್ದೆ ಎಂದು ಹೇಳಿದ್ದಾರೆ.

DK Shivakumar

ನಾನು ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ನಂತರ ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಇಲ್ಲಿ ಬಂದು ಪಕ್ಷಕ್ಕಾಗಿ ಸಾಕಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ. ಹಾಗಾಗಿ ನನಗೆ ಈ ಬಾರಿ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕೊಡಲೇಬೇಕು ಅಂತ ಸಿಎಂ ಹಾಗೂ ಡಿಸಿಎಂಗೆ ಡಿಮ್ಯಾಂಡ್ ಮಾಡುವುದಾಗಿ ಹೇಳಿದರು.

ಪವರ್‌ ಶೇರಿಂಗ್‌ ಗುಪ್ತವಾಗಿಟ್ಟಿದೆ:
ಇದೇ ವೇಳೆ ಸಿಎಂ-ಡಿಸಿಎಂ ನಡುವೆ ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್‌ನಲ್ಲಿ ಆಗಿರುವ ತೀರ್ಮಾನಗಳು ನಮಗೆ ಗೊತ್ತಾಗಲ್ಲ. ಹೈಕಮಾಂಡ್ ಆ ವಿಚಾರವನ್ನು ಗುಪ್ತವಾಗಿ ಇಟ್ಟಿದೆ. ನಮಗೆ ಸಿಎಂ -ಡಿಸಿಎಂ ಇಬ್ಬರು ಎರಡು ಕಣ್ಣುಗಳು ಇದ್ದಂತೆ. ಇಬ್ಬರಲ್ಲಿ ಯಾರು ಸಿಎಂ ಆದರೂ ನನಗೆ ಸಂತೋಷ ಎಂದು ಹೇಳಿದ್ದಾರೆ.

Share This Article