– ಗುಜರಾತ್ ಗಲಭೆ ಉಲ್ಲೇಖ – ವಿವಾದದ ಸುಳಿಯಲ್ಲಿ ಎಂಪುರಾನ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ L2: ಎಂಪುರಾನ್ (L2: Empuraan) ಸಿನಿಮಾ ತೆರೆ ಕಂಡ 3ನೇ ದಿನವೇ ವಿವಾದ ಸುಳಿಯಲ್ಲಿ ಸಿಲುಕಿದೆ. ಇದರಿಂದ ಎಚ್ಚೆತ್ತ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ಈ ಬೆನ್ನಲ್ಲೇ ನಾಯಕ ನಟ ಮೋಹನ್ ಲಾಲ್ (Mohan Lal) ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.
- Advertisement -
ಹೌದು. ಮಾರ್ಚ್ 27ರಂದು ತೆರೆ ಕಂಡ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ಎಲ್2: ಎಂಪುರಾನ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ 2ನೇ ದಿನದಲ್ಲಿ 100 ಕೋಟಿ ಬಾಚಿಕೊಂಡಿದ್ದು, ಬಾಕ್ಸ್ ಆಫೀಸ್ ಸೇರಿದೆ. ಸದ್ಯ ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯನ್ನು (2002 Gujarat Riots) ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ಘಟನೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋಹನ್ ಲಾಲ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.
- Advertisement -
- Advertisement -
L2: ಎಂಪುರಾನ್ ಚಿತ್ರದಿಂದ ಅಭಿಮಾನಿಗಳಿಗೆ ಉಂಟಾದ ನೋವಿಗೆ ನಾನು ಕ್ಷಮೆ ಕೋರುತ್ತೇನೆ. ಕೆಲ ದೃಶ್ಯಗಳಲ್ಲಿ ಗುಜರಾತ್ ಗಲಭೆಯ ಉಲ್ಲೇಖ ಮಾಡಲಾಗಿದೆ ಎಂಬ ಕಾರಣಕ್ಕೆ ಚಿತ್ರತಂಡವು 17 ದೃಶ್ಯಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
- Advertisement -
ಲೂಸಿಫರ್‌ನ 2ನೇ ಭಾಗವಾದ ಎಂಪುರಾನ್ ಚಿತ್ರದಲ್ಲಿ ಹೊರಹೊಮ್ಮಿದ ಕೆಲವು ರಾಜಕೀಯ, ಸಾಮಾಜಿಕ ವಿಷಯಗಳು ನನ್ನ ಅನೇಕ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಕಲಾವಿದನಾಗಿ ನನ್ನ ಯಾವುದೇ ಚಲನಚಿತ್ರಗಳು ರಾಜಕೀಯ ಚಳವಳಿ, ಪರಿಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷ ಭಾವನೆ ಮೂಡಿಸದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ ಎಂಪುರಾನ್ ತಂಡದ ಪರವಾಗಿ ನನ್ನ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಹಾಗಾಗಿ ಧಕ್ಕೆ ತರುವ ಕೆಲ ದೃಶ್ಯಗಳನ್ನು ತೆಗೆದುಹಾಕಲು ತಂಡ ನಿರ್ಧರಿಸಿದೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆರೋಪ ಏನು?
L2: ಎಂಪುರಾನ್ ಚಿತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗುಜರಾತ್ ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳನ್ನು ಪ್ರಯೋಗಿಸಲಾಗಿದೆ. ಈ ದೃಶ್ಯಗಳಲ್ಲಿ ಗುಜರಾತ್ ಗಲಭೆಯನ್ನು ತಿರುಚಲಾಗಿದೆ ಹಾಗೂ ಬಾಬಾ ಬಜರಂಗಿ ಹೆಸರನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ನಿರ್ದೇಶಕ, ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸಹ ಇದಕ್ಕೆ ಒಪ್ಪಿದ್ದಾರೆ ಅಂತ ತಿಳಿದುಬಂದಿದೆ.
ರಾಜೀವ್ ಚಂದ್ರಶೇಖರ್ ಅಸಮಾಧಾನ
ಸದ್ಯ ಚಿತ್ರತಂಡದ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಬಿಟ್ಟಿದ್ದರೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನು ಲೂಸಿಫರ್ ಚಿತ್ರ ನೋಡಿದ್ದೇನೆ ಮತ್ತು ಅದನ್ನು ಇಷ್ಟಪಟ್ಟಿದ್ದೇನೆ. ನಾನು ಎಂಪುರಾನ್ ಚಿತ್ರವನ್ನು ಲೂಸಿಫರ್‌ನ ಮುಂದುವರಿದ ಭಾಗ ಎಂದು ಕೇಳಿದಾಗ ನೋಡುತ್ತೇನೆ ಎಂದು ಹೇಳಿದ್ದೆ. ಆದ್ರೆ ಈಗ ಚಿತ್ರದ ನಿರ್ಮಾಪಕರು ಸ್ವತಃ ಚಲನಚಿತ್ರದಲ್ಲಿ 17 ತಿದ್ದುಪಡಿಗಳನ್ನು ಮಾಡಿದ್ದಾರೆ ಮತ್ತು ಚಲನಚಿತ್ರವನ್ನು ಮರು-ಸೆನ್ಸಾರ್ಶಿಪ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ಮೋಹನ್‌ಲಾಲ್ ಅಭಿಮಾನಿಗಳು ಮತ್ತು ಇತರ ವೀಕ್ಷಕರನ್ನು ತೊಂದರೆಗೀಡುಮಾಡುವ ವಿಷಯಗಳು ಚಿತ್ರದಲ್ಲಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಚಲನಚಿತ್ರವನ್ನು ಚಲನಚಿತ್ರವಾಗಿ ನೋಡಬೇಕು. ಅದನ್ನು ಇತಿಹಾಸವಾಗಿ ನೋಡಲಾಗುವುದಿಲ್ಲ. ಅಲ್ಲದೇ, ಸತ್ಯವನ್ನು ತಿರುಚಿ ಕಥೆಯನ್ನು ನಿರ್ಮಿಸಲು ಪ್ರಯತ್ನಿಸುವ ಯಾವುದೇ ಚಲನಚಿತ್ರವು ವಿಫಲಗೊಳ್ಳುತ್ತದೆ. ಹಾಗಾಗಿ, ನಾನು ಲೂಸಿಫರ್‌ನ ಈ ಸೀಕ್ವೆಲ್ ಅನ್ನು ನೋಡುತ್ತೇನೆಯೇ? ಖಂಡಿತಾ ಇಲ್ಲ. ಈ ರೀತಿಯ ಚಲನಚಿತ್ರ ನಿರ್ಮಾಣದಿಂದ ನಾನು ನಿರಾಶೆಗೊಂಡಿದ್ದೇನೆ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.