ಪುಲ್ವಾಮಾ: ಭಾರತೀಯ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದ ಪುಲ್ವಾಮಾ ಸಮೀಪದ ಬರೇಲಿಯಲ್ಲಿ, ಸುಮಾರು 80 ವರ್ಷ ಹಳೆಯ ಶಿವ ದೇಗುಲವೊಂದನ್ನು ನವೀಕರಿಸಲು ಮುಸ್ಲಿಂರು ಹಿಂದೂಗಳ ಜೊತೆ ಕೈ ಜೋಡಿಸಿದ್ದಾರೆ.
ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರ ಹುತಾತ್ಮರಾಗಿದ್ದರು. ಆಗಿನಿಂದ ಪುಲ್ವಾಮಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥತಿ ನಿರ್ಮಾಣವಾಗಿದೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಆದ್ರೆ ಈ ನಡುವೆಯೂ ಮುಸ್ಲಿಂ ಬಾಂಧವರು ಹಿಂದೂಗಳ ಜೊತೆಗೂಡಿ ಪುರಾತನ ಶಿವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಏಕತೆಯನ್ನು ಮೆರೆದಿದ್ದಾರೆ.
ಪುಲ್ವಾಮಾದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಬರೇಲಿಯಲ್ಲಿ 80 ವರ್ಷಗಳ ಹಳೆಯ ಹಿಂದೂ ದೇವಸ್ಥಾನವಿದೆ. ಇಲ್ಲಿರುವ ಕಾಶ್ಮೀರಿ ಪಂಡಿತ್ ಕುಟುಂಬಸ್ಥರ ಜೊತೆ ಸೇರಿ ಮುಸ್ಲಿಂ ಕುಟುಂಬವೊಂದು ದೇಗುಲದ ಮರು ನವೀಕರಣ ಕಾರ್ಯಕ್ಕೆ ಕೈಜೋಡಿಸಿದೆ. ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರಿಂದ ಈ ದೇಗುಲದ ನವೀಕರಣ ಕೆಲಸವನ್ನು ನಿಲ್ಲಿಸಲಾಗಿತ್ತು. ಆದ್ರೆ ಮಹಾಶಿವರಾತ್ರಿ ಮುಗಿದ ಮೇಲೆ ಮತ್ತೆ ದೇವಸ್ಥಾನದ ಕೆಲಸವನ್ನು ಆರಂಭಿಸಲಾಗಿದೆ.
30 ವರ್ಷಗಳ ಹಿಂದೆ ಬರೇಲಿ ಪ್ರದೇಶದಲ್ಲಿ ಉಗ್ರರ ಹಾವಳಿ ಹೆಚ್ಚಾದ ಕಾರಣಕ್ಕೆ ಅನೇಕ ಹಿಂದೂ ಕುಟುಂಬಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದವು. ಆದರೆ ಕೆಲ ಹಿಂದೂ ಕಾಶ್ಮೀರಿ ಪಂಡಿತರು ಇಲ್ಲಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿರುವ ಶಿವ ದೇವಾಲಯ ಪಾಳುಬಿದ್ದು ಹಾಳಾಗಿ ಹೋಗಿತ್ತು. ಆದರಿಂದ ಹಿಂದೂಗಳು ಈ ದೇವಾಲಯವನ್ನು ನವೀಕರಿಸಲು ನಿರ್ಧರಿಸಿದ್ದರು. ಆದ್ರೆ ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅವರು ಮುಸ್ಲಿಂ ಭಾಂದವರ ಸಹಾಯ ಕೇಳಿದ್ದಾರೆ. ದೇಗುಲದ ಪಕ್ಕದಲ್ಲೇ ಮಸೀದಿ ಇರುವ ಕಾರಣಕ್ಕೆ ಮುಸ್ಲಿಂ ಭಾಂದವರು ಕೂಡ ದೇವಾಲಯದ ನವೀಕರಣ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.
ಈ ಕುರಿತು ಸ್ಥಳೀಯ ಮುಸಿಂ ಭಾಂದವರು ಮಾತನಾಡಿ, ಇಲ್ಲಿ ನಾವೆಲ್ಲರು ಸಹೋದರರಂತೆ ವಾಸಿಸುತ್ತಿದ್ದೇವೆ. ನಮ್ಮ ಮಧ್ಯೆ ಧರ್ಮದ ಬೇಧವಿಲ್ಲ. ನಾವು ನಮ್ಮ ದೇಗುಲಗಳನ್ನು ಹೇಗೆ ಗೌರವಿಸುತ್ತೇವೆ ಹಾಗೆಯೇ ಹಿಂದೂ ದೇಗುಲಗಳನ್ನು ಗೌರವದಿಂದ ಕಾಣುತ್ತೇವೆ. ಆದರಿಂದ ನಮ್ಮ ಹಿಂದೂ ಭಾಂದವರ ಜೊತೆಗೂಡಿ ಶಿವ ದೇವಾಲಯದ ನವೀಕರಣ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೇವೆ. ಈ ಹಿಂದೆ ಯಾವ ರೀತಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವೋ ಅದೇ ರೀತಿ ಮುಂದಿನ ದಿನಗಳಲ್ಲೂ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿವನ ದೇವಾಲಯ ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv