ಚಾಮರಾಜನಗರ: ಧರ್ಮಬೇಧ ಮರೆತು ಮಳೆಗಾಗಿ ಶಿವನಿಗೆ ಮುಸ್ಲಿಂ ಮಹಿಳೆಯರು ಜಲಾಭಿಷೇಕ ಮಾಡಿ ಪ್ರಾರ್ಥಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿರುವ ಹಿನ್ನೆಲೆ ಜನರು ಆತಂಕದಲ್ಲಿದ್ದಾರೆ. ಆದ್ದರಿಂದ ವರುಣನ ಕೃಪೆಗಾಗಿ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಶಿವನ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಜನಾರ್ದನ ಪ್ರತಿಷ್ಠಾನದಿಂದ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಶಿವನಿಗೆ ಸಾರ್ವಜನಿಕರಿಂದ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನೆರವೇರಿಸಲಾಯ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಕೂಡ ಈ ಪೂಜೆಯಲ್ಲಿ ಭಾಗಿಯಾಗಿ ನೀಲಕಂಠನಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
Advertisement
Advertisement
ಈ ವಿಶೇಷ ಪೂಜೆಯಲ್ಲಿ ಸಾಕಷ್ಟು ಮಂದಿ ಭಕ್ತರು ಶಿವನಿಗೆ ಅಭಿಷೇಕ ನೆರವೇರಿಸಿ, ಪಾರ್ಥನೆ ಸಲ್ಲಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಶಿವನಿಗೆ ಭಕ್ತಿಯಿಂದ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿರುವುದು ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಧರ್ಮ ಬೇರೆಯಾದರೂ ಎಲ್ಲಾ ದೇವರು ಒಂದೇ ಎನ್ನುವ ಸಂದೇಶವನ್ನು ಈ ಮುಸ್ಲಿಂ ಮಹಿಳೆಯರು ಸಾರಿದ್ದಾರೆ.