ಲಕ್ನೊ: ಬುರ್ಖಾ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಯರಿಗೆ ತರಗತಿಯೊಳಗೆ ಪ್ರವೇಶಿಸಲು ನಿರಾಕರಿಸಿ ಕಾಲೇಜಿನ ಸಿಬ್ಬಂದಿ ವಾಪಸ್ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಫಿರ್ಜೋಬಾದಿನಲ್ಲಿ ನಡೆದಿದೆ.
ಫಿರ್ಜೋಬಾದಿನ ಎಸ್‌ಆರ್‌ಕೆ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬುರ್ಖಾ ಧರಿಸಿ ಬಂದಿದ್ದರು. ಈ ವೇಳೆ ಅವರನ್ನು ಗಮನಿಸಿದ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯರನ್ನು ತಡೆದು ಬುರ್ಖಾ ಧರಿಸಿ ಕಾಲೇಜಿಗೆ ಬರುವಂತಿಲ್ಲ, ತರಗತಿ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.
Advertisement
Firozabad:Some students were denied entry to SRK College,allegedly because they were wearing burqa.P Rai, Principal,SRK College, says,"It's an old order that students have to wear uniform&carry ID card; burqa isn't included in uniform. Now,this order is being implemented."(07.09) pic.twitter.com/PCMRyittSA
— ANI UP/Uttarakhand (@ANINewsUP) September 13, 2019
Advertisement
ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿ, ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ. ಬುರ್ಖಾ ಕಾಲೇಜಿನ ಸಮವಸ್ತ್ರದ ಭಾಗವಲ್ಲ. ಆದ್ದರಿಂದ ಬುರ್ಖಾವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಕಾಲೇಜಿನ ಐಡಿ ಕಾರ್ಡಿನೊಂದಿಗೆ ಬರಬೇಕೆಂಬುದು ಹಿಂದಿನಿಂದಲೂ ನಿಯಮವಿದೆ. ಆದರೆ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವ ಕಾರಣಕ್ಕೆ ಇದನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಸರಿಸುತ್ತಿರಲಿಲ್ಲ. ಈಗ ಪ್ರವೇಶ ಪ್ರಕ್ರಿಯೆ ಮುಗಿದಿದೆ. ಆದ್ದರಿಂದ ನಿಯಮವನ್ನು ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದೆ.
Advertisement
ಕಾಲೇಜಿನ ಪ್ರಾಂಶುಪಾಲ ಪ್ರಭಾಕರ್ ರೈ ಮಾತನಾಡಿ, ಸೆಪ್ಟೆಂಬರ್ 11ರ ನಂತರ ಸಮವಸ್ತ್ರ ಮತ್ತು ಐಡಿ ಕಾರ್ಡ್ ಇಲ್ಲದ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುತ್ತಿಲ್ಲ. ಕಾಲೇಜಿನ ಡ್ರೆಸ್ ಕೋಡ್‍ನಲ್ಲಿ ಬುರ್ಖಾ ಸೇರಲ್ಲ. ಅಲ್ಲದೆ ಕಾಲೇಜಿನ ನಿಯಮದಂತೆ ಆಡಳಿತ ಮಂಡಳಿ ನಿರ್ಧರಿಸಿದ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ತರಗತಿಗೆ ಬರಬೇಕಾಗುತ್ತದೆ ಎಂದು ತಿಳಿಸಿದರು.
Advertisement
ಆದರೆ ಬುರ್ಖಾ ಧರಿಸಿ ಕಾಲೇಜಿನೊಳಗೆ ಬಂದಿದ್ದ ವಿದ್ಯಾರ್ಥಿನಿಯರು ಹೇಳುವುದೇ ಬೇರೆಯಾಗಿದೆ. ಈ ಹಿಂದೆ ಹೀಗೆ ಇರಲಿಲ್ಲ. ಈ ನಿಯಮ ಕಡ್ಡಾಯ ಇರಲಿಲ್ಲ, ಇದ್ದಕ್ಕಿದ್ದ ಹಾಗೆ ಕಾಲೇಜಿಗೆ ಬಂದವರನ್ನು ತರಗತಿಗೆ ಬಿಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲ ವಿದ್ಯಾರ್ಥಿನಿಯರು ನಮಗೆ ಬುರ್ಖಾ ತೆಗೆಯುವಂತೆ ಹೇಳಿದರು ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಅವರು ಮಾತನಾಡಿ, ಇದು ಕಾಲೇಜಿನ ಆಂತರಿಕ ವಿಚಾರ. ಘಟನೆ ನಡೆದಿದ್ದು ನನ್ನ ಗಮನಕ್ಕೆ ಬಂದಿದೆ. ಕಾಲೇಜಿನ ನಿಯಮದಂತೆ ಸಮವಸ್ತ್ರ, ಐಡಿ ಕಾರ್ಡ್ ಕಡ್ಡಾಯ, ಆದ್ದರಿಂದ ಸಿಬ್ಬಂದಿ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದಾರೆ. ಅವರಿಗೆ ಬುರ್ಖಾ ತೆಗೆಯಿರಿ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿಲ್ಲ. ನೀವು ಬುರ್ಖಾ ಧರಿಸಿ ಬರಬಾರದು, ಕಾಲೇಜಿನ ಸಮವಸ್ತ್ರದಲ್ಲಿ ಬರಬೇಕೆಂದು ತಿಳಿಸಿದ್ದಾರೆ ಅಷ್ಟೇ ಎಂದು ಸಿಬ್ಬಂದಿ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.