ರಾಯಚೂರು: ನಗರದ ಎಚ್.ಆರ್.ಬಿ ಬಡಾವಣೆಯಲ್ಲಿರುವ ಬೃಂದಾವನ ಹೌಸಿಂಗ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನಂತೇಶ್ವರ ದೇವಾಲಯ ನಿಜಕ್ಕೂ ಹಿಂದೂ-ಮುಸ್ಲಿಂ ಸಂಗಮದ ಕೇಂದ್ರವಾಗಿದೆ.
Advertisement
ಬಡಾವಣೆಯ ಜನತೆ ಉದ್ಯಾನವನದಲ್ಲಿದ್ದ ಹಳೆಯ ಪುಟ್ಟ ದೇವಾಲಯವನ್ನು ಜೀರ್ಣೊದ್ಧಾರ ಮಾಡಿ ನೂತನ ದೇವಸ್ಥಾನ ನಿರ್ಮಿಸಿದ್ದಾರೆ. ಈ ಕಾಲೋನಿಯಲ್ಲಿ ಸುಮಾರು 215 ಮನೆಗಳಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಮುಸಲ್ಮಾನರೇ ಇದ್ದು, ದೇವಾಲಯ ಪುನರ್ ನಿರ್ಮಾಣಕ್ಕೆ ಹಿಂದೂ ನಿವಾಸಿಗಳು ಮುಂದಾದಾಗ ಮುಸ್ಲಿಮರು ಸಾಥ್ ಕೊಟ್ಟಿದ್ದಾರೆ. ತಮ್ಮ ಕೈಲಾದಷ್ಟು ತನು-ಮನ-ಧನಗಳನ್ನ ಅರ್ಪಿಸಿ ದೇವಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Advertisement
Advertisement
ನಂದಿ, ಆಂಜನೇಯ, ಗಣಪತಿ, ಶೇಷ ದೇವರು, ರುದ್ರದೇವರ ಮೂರ್ತಿಗಳನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಬೃಂದಾವನ ಹೌಸಿಂಗ್ ಕಾಲೋನಿ ನಿವಾಸಿಗಳ ಸಂಘದಿಂದ ನಗರದಲ್ಲಿ ಹೊಸದೊಂದು ಭಾವೈಕ್ಯತೆಯ ಅಧ್ಯಾಯ ಆರಂಭವಾಗಿದೆ.
Advertisement
ಉದ್ಯಾನವನದಲ್ಲಿ ದೇವಾಲಯ ನಿರ್ಮಾಣವಾಗಿರುವ ಹಾಗೇ ಮುಸ್ಲಿಂ ಮಕ್ಕಳಿಗಾಗಿ ಮದರಸಾ ಕೂಡ ನಿರ್ಮಿಸಲಾಗಿದೆ. ಅಕ್ಕಪಕ್ಕದಲ್ಲೇ ಮದರಸಾ ಹಾಗೂ ದೇವಾಲಯಗಳಿದ್ದು ಹಿಂದೂ-ಮುಸಲ್ಮಾನರು ನಿಜಕ್ಕೂ ಅಣ್ಣತಮ್ಮಂದಿರಂತೆ ಇಲ್ಲಿ ವಾಸವಾಗಿದ್ದಾರೆ. ಸಂಜೆಯಾದ್ರೆ ಉದ್ಯಾನವನದಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಪರಸ್ಪರ ಆಚರಣೆಗಳನ್ನು ಗೌರವಿಸುತ್ತಾ ಬಂದಿದ್ದಾರೆ.
ನಿಜಾಮರು, ರಜಾಕರ ಆಡಳಿತಕ್ಕೊಳಪಟ್ಟ ರಾಯಚೂರು ಮೊದಲಿನಿಂದಲೂ ಗಲಭೆಗಳಿಂದ ದೂರ ಉಳಿದು ಹಿಂದೂ-ಮುಸ್ಲಿಂರ ಭಾವೈಕ್ಯದ ಕೇಂದ್ರದಂತೆಯೇ ಇದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಎರಡು ಧರ್ಮದವರು ಒಟ್ಟಾಗಿ ದೇವಾಲಯ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.