ಬಳ್ಳಾರಿ: ರಾಜ್ಯಾದ್ಯಂತ ಹಿಂದೂ-ಮುಸ್ಲಿಂ ವಿವಾದ ತಾರಕಕ್ಕೆ ಏರುತ್ತಿದೆ. ಒಂದು ಕಡೆ ಹಿಜಬ್ ಗಲಾಟೆ ಮತ್ತೊಂದ್ಕಡೆ ಮುಸ್ಲಿಂ ವ್ಯಾಪಾರ ಬಹಿಷ್ಕಾರ. ಹೀಗೆ ಹಿಂದೂ-ಮುಸ್ಲಿಂ ನಡುವೆ ಒಂದು ದೊಡ್ಡ ಕಂದಕವೇ ಏರ್ಪಟ್ಟಿದೆ. ಆದರೆ ಈ ಮಧ್ಯೆ ಹಿಂದೂ- ಮುಸ್ಲಿಂ ನಾವೆಲ್ಲಾ ಒಂದೇ, ಹಿಂದೂ-ಮುಸ್ಲಿಂ ಎನ್ನುವುದಕ್ಕಿಂತ ಮೊದಲು ನಾವು ಮಾನವರು ಎನ್ನುವ ಸಂದೇಶವನ್ನು ಈ ಸ್ನೇಹಿತರು ಸೇರಿದ್ದಾರೆ.
ಕರಾವಳಿಯಲ್ಲಿ ಆರಂಭವಾದ ಹಿಜಬ್ ವಿವಾದ ಇಡೀ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಸರ್ವ ಜನಾಂಗದ ಶಾಂತಿ ತೋಟ ಎಂದು ಕರೆಸಿಕೊಳ್ತಿದ್ದ ಕರ್ನಾಟಕದಲ್ಲೀಗ ಧರ್ಮ ಸಂಘರ್ಷ ಎಲ್ಲೆ ಮೀರುತ್ತಿದೆ. ಹೀಗಿರುವಾಗ ಬಳ್ಳಾರಿಯ ಇಬ್ಬರು ಸ್ನೇಹಿತರು ನಮಗೆ ಧರ್ಮದ ಹಂಗಿಲ್ಲ.. ನಾವಿಬ್ಬರೂ ಒಂದೇ ಎಂಬ ಸಾಮರಸ್ಯದ ಮಂತ್ರ ಪಠಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ
ಹೌದು. ಮೂಲತಃ ಬಳ್ಳಾರಿ ಕೌಲ್ ಬಜಾರ್ ನಿವಾಸಿಯಾಗಿರುವ ಗೋಪಾಲ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ. ಕಳೆದ ಕೆಲ ವರ್ಷಗಳಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರುವ ಗೋಪಾಲನಿಗೆ ಬಾಲ್ಯದ ಗೆಳೆಯ ಮಹಮ್ಮದ್ ನೆರವಾಗಿದ್ದಾರೆ. ಗೋಪಾಲನ ಕಷ್ಟಕ್ಕೆ ಮರುಗಿರುವ ಮಹಮ್ಮದ್, ಕಳೆದ 2 ವರ್ಷಗಳಿಂದ ಸ್ನೇಹಿತನ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಡಾ.ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ
ಕಳೆದೆರಡು ವರ್ಷಗಳಿಂದ ಗೋಪಾಲ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರೆ. ದಿನ ಕಳೆದಂತೆ ಗೋಪಾಲರ ಎಡಗಾಲು ದಪ್ಪವಾಗುತ್ತಿದ್ದು ನಡೆದಾಡಲು ಸಹ ಕಷ್ಟವಾಗ್ತಿದೆ. ಅನೇಕ ವೈದ್ಯರ ಬಳಿ ಚಿಕಿತ್ಸೆಗಾಗಿ ಅಲೆದಿದ್ದು, ಲಕ್ಷಾಂತರ ರೂಪಾಯಿ ಖರ್ಚಾಗ್ತಿದೆ. ಅನಾಥನಾಗಿರುವ ಗೋಪಾಲನಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಾಯ ಮಾಡಿ ಅಂತ ಮಹಮ್ಮದ್ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ದೊಡ್ಡ ಒಡಕು ನಿರ್ಮಾಣವಾಗುತ್ತಿರುವ ಈ ಸಮಯದಲ್ಲಿ ತಮ್ಮ ಧರ್ಮಕ್ಕಿಂತ ಸ್ನೇಹವೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿರುವ ಈ ಇಬ್ಬರು ಸ್ನೇಹಿತರಿಗೆ ಸೆಲ್ಯೂಟ್ ಹೊಡೆಯೋಣ.. ಜೊತೆಗೆ ಗೋಪಾಲ್ ಚಿಕಿತ್ಸೆಗಾಗಿ ನೆರವಾಗೋಣ.