ಲಕ್ನೋ: ಕಳೆದ 10 ವರ್ಷಗಳಿಂದ ಪ್ರೀತಿಸಿದ ಗೆಳತಿಯನ್ನು ಮದುವೆಯಾಗಲು 34 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಎಂದು ಬದಲಾಯಿಸಿಕೊಂಡಿದ್ದಾನೆ.
ಮೂರು ದಿನಗಳ ಹಿಂದೆ ಯುವತಿ, ಸದ್ದಾಂ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿ, ಮದುವೆಯ ನೆಪದಲ್ಲಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿದ್ದರು. ಆದರೆ, ಈಗ ಇಬ್ಬರೂ ಸ್ವಇಚ್ಛೆಯಿಂದ ಮದುವೆಯಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ದೇವೇಂದ್ರ ಸಿಂಗ್ ತಿಳಿಸಿದ್ದಾರೆ.
ನಗರ ಬಜಾರ್ ನಿವಾಸಿ ಸದ್ದಾಂ ಹುಸೇನ್, ಅದೇ ಗ್ರಾಮದ ಯುವತಿ (30 ವರ್ಷ) ಜೊತೆ ಸುಮಾರು 10 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ. ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಮದುವೆ ಸಾಧ್ಯವಾಗಿರಲಿಲ್ಲ. ಯುವತಿ ಸದ್ದಾಂ ಮೇಲೆ ಹಲವು ಬಾರಿ ಒತ್ತಡ ಹೇರಿದ್ದಳು. ಆದರೆ ಸದ್ದಾಂ ಕುಟುಂಬ ಅವಳನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.
ಇದರಿಂದ ತೊಂದರೆಗೀಡಾದ ಯುವತಿ ಮೂರು ದಿನಗಳ ಹಿಂದೆ ಬಸ್ತಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿ, ಯುವಕ ಸದ್ದಾಂ ಮೇಲೆ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯಿಸುವುದು ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಳು.
ಎಸ್‌ಪಿ ಆದೇಶದ ಮೇರೆಗೆ ಪೊಲೀಸರು ಸದ್ದಾಂ ಮತ್ತು ಆತನ ಕುಟುಂಬದವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ, ಸದ್ದಾಂ ಮತ್ತು ಯುವತಿ ನಗರದ ಮಾರುಕಟ್ಟೆಯಲ್ಲಿರುವ ದೇವಸ್ಥಾನದಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದಾರೆ. ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಾಯಿಸಿಕೊಂಡಿದ್ದಾನೆ.