ಬೆಂಗಳೂರು: ಶಾಮನೂರು ಶಿವಶಂಕರಪ್ಪ(Shamanur Shivashankarappa) ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ (Davanagere South) ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತ ನಾಯಕರು ನಾಲ್ವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ದಾವಣಗೆರೆ, ಬಾಗಲಕೋಟೆ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ (Karnataka) ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಇಂದು ರಾತ್ರಿ ಭಾರತ್ ಜೋಡೋ ಭವನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವು ನಾಯಕರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಮನವೊಲಿಸುವ ಪ್ರಯತ್ನ ಮಾಡಿದ ಸುರ್ಜೇವಾಲಾ ಅವರು ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಸೂಚಿಸಿದರು.
ಅಲ್ಪಸಂಖ್ಯಾತ ಸಮುದಾಯದ ಆಕಾಂಕ್ಷಿಗಳ ಪಟ್ಟಿ ಕೊಡಲು ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸಾಧಿಕ್ ಪೈಲ್ವಾನ್, ಸೈಫುಲ್ಲಾ ಪುತ್ರರ ಪೈಕಿ ಒಬ್ಬರಿಗೆ ಕೊಡಲು ಮನವಿ ಮಾಡಲಾಗಿದೆ. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ಈ ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಮಧು ಬಂಗಾರಪ್ಪ, ಕೆ.ಹೆಚ್.ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಆರ್.ಬಿ.ತಿಮ್ಮಾಪೂರ, ರಹೀಂಖಾನ್, ತನ್ವೀರ್ ಸೇಠ್, ಸಲೀಂ ಅಹ್ಮದ್, ಹೆಚ್.ಅಂಜನೇಯ, ಮಂಜುನಾಥ ಭಂಡಾರಿ, ದಾವಣಗೆರೆ ಮತ್ತು ಬಾಗಲಕೋಟೆಯ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.

