ಧಾರವಾಡ: ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ಸಂಸದ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲೇ ಮುಸ್ಲಿಂ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೆಬ್ರವರಿ 2ರಂದು ಜಿಲ್ಲೆಯ ಹಾಸ್ಮಿಯ ಅಲ್ಪಸಂಖ್ಯಾತ ಬಡಾವಣೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಇರ್ಫಾನ್ ತಾಡಪತ್ರಿ ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಕೂಡ ಭಾಗಿಯಾಗಿದ್ದರು.
ಬಿಜೆಪಿ ನಾಯಕರ ಮುಂದೆಯೇ ವೇದಿಕೆ ಮೇಲೆ ಮಾತನಾಡಿದ ಇರ್ಫಾನ್ ಅವರು, ಬಿಜೆಪಿಗೆ ಅಲ್ಪಸಂಖ್ಯಾತರು ಮತ ಹಾಕುವುದಿಲ್ಲ ಎಂಬ ಭಾವನೆ ನಿಮ್ಮ ಮನಸ್ಸಿಂದ ತೆಗೆದು ಹಾಕಿ. ಈ ಮಾತನ್ನು ವಾಪಾಸ್ ತೆಗೆದುಕೊಳ್ಳಿ. ಧಾರವಾಡದಲ್ಲಿ ಅಮೃತ ದೇಸಾಯಿಗೆ ಮುಸ್ಲಿಮರು ಮತಹಾಕಿದಕ್ಕೆ ಹೆಚ್ಚಿನ ಅಂತರದಿಂದ ಅವರು ಗೆದ್ದಿದ್ದಾರೆ. ನಾವು ಬಿಜೆಪಿ ಜೊತೆಗಿದ್ದೇವೆ. ಬಿಜೆಪಿಯ ಕೆಲ ನಾಯಕರು ಅಲ್ಪಸಂಖ್ಯಾತ ಬಗ್ಗೆ ಆಡುವ ಮಾತಿನಿಂದ ನಮ್ಮ ಮುಸ್ಲಿಂ ಬಾಂಧವರಿಗೆ ಬೇಜಾರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಪಕ್ಷ ಮುಖ್ಯವಲ್ಲ, ಜನಪರವಾಗಿ ಕೆಲಸ ಮಾಡುವ ವ್ಯಕ್ತಿ ಮುಖ್ಯ. ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ನಾವು ಮತ ಹಾಕುತ್ತೇವೆ. ನಾವು ಅಭಿವೃದ್ಧಿಗೆ ಬೆಂಬಲಿಸುತ್ತೇವೆ. ಬಿಜೆಪಿ ಜೊತೆ ನಾವಿದ್ದೇವೆ ಎಂದು ಇರ್ಫಾನ್ ತಾಡಪತ್ರಿ ಹೇಳಿದರು.
ಬಿಜೆಪಿ ಮುಸ್ಲಿಮರ ಹತ್ತಿರ ಬರಲಿ. ನಾವು ನಿಮಗೆ ಇನ್ನಷ್ಟು ಹತ್ತಿರವಾಗುತ್ತೇವೆ. ನೀವು ಒಂದು ಹೆಜ್ಜೆ ಬಂದರೆ ನಾವು ಎರಡು ಹೆಜ್ಜೆ ನಿಮಗೆ ಹತ್ತಿರವಾಗುತ್ತೇವೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಮುಸ್ಲಿಂ ಮುಖಂಡರ ಮಾತನ್ನು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv