ಶಿವಮೊಗ್ಗ: ಹಿಂದೂ ಯುವಕನ ಜೊತೆ ಬೈಕ್ ನಲ್ಲಿ ತೆರಳಿದ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ಅದೇ ಸಮುದಾಯದ ಯುವಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಮುಸ್ಲಿಂ ಯುವತಿ ತನ್ನ ಕ್ಲಾಸ್‍ಮೇಟ್ ಹಿಂದೂ ಹುಡುಗ ಮತ್ತು ಯುವತಿಯೊಂದಿಗೆ ಬೈಕ್ ನಲ್ಲಿ ಹೋಗುವಾಗ ಸವಾಯಿಪಾಳ್ಯದ ಬಳಿ ಇವರನ್ನು ಕೆಲ ಮುಸ್ಲಿಂ ಯುವಕರು ತಡೆದಿದ್ದಾರೆ. ಅಲ್ಲದೆ ಯುವತಿಯ ಸ್ಕೂಟರ್ ಮತ್ತು ಮೊಬೈಲ್ ಕಿತ್ತುಕೊಂಡಿದ್ದಾರೆ.
ಅನ್ಯ ಧರ್ಮದ ಯುವಕನ ಜೊತೆ ಹೋಗ್ತೀಯಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬುರ್ಕಾ ಧರಿಸಿದ ಯುವತಿ ವಿಡಿಯೋ ತೆಗೆಯಬೇಡಿ ಎಂದು ಬೇಡಿಕೊಂಡರೂ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನಾವು ಕಾಲೇಜಿಗೆ ಹೋಗುತ್ತಿದ್ದೇವೆ. ಸೆಮಿನಾರ್ ಇದೆ ಬಿಟ್ಟು ಬಿಡಿ ಎಂದು ಬೇಡಿಕೊಂಡ್ರೂ ಹಿಂಸಿಸಿದ್ದಾರೆ.
ಆ ಯುವತಿ ತನ್ನ ಕ್ಲಾಸ್‍ಮೇಟ್‍ಗಳ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಷೇರ್ ಇಟ್‍ನಲ್ಲಿ ಕಳಿಸಿಕೊಂಡು ಇಸ್ಲಾಂ ಗ್ರೂಪ್‍ಗಳಲ್ಲಿ ಹರಿಯಬಿಟ್ಟಿದ್ದಾರೆ. ಇಷ್ಟೇ ಅಲ್ಲ, ಪುನಃ ರಾತ್ರಿ ಮನೆಗೂ ನುಗ್ಗಿ ಯುವತಿ ಹಾಗೂ ಆಕೆಯ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಐವರ ವಿರುದ್ಧ ದೂರು ದಾಖಲಾಗಿದೆ. ಆದ್ರೆ ಪೊಲೀಸರು ಮಾತ್ರ ಈವರೆಗೆ ಯಾರನ್ನೂ ಬಂಧಿಸಿಲ್ಲ ಎನ್ನಲಾಗಿದೆ.