ಮಂಗಳೂರು: ಎನ್‌ಆರ್‌ಸಿ, ಸಿಎಎ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನಾ ಸಭೆ ನಡೆಸಲಿದ್ದಾರೆ. ಅಡ್ಯಾರ್‌ನಲ್ಲಿ ಸಮಾವೇಶ ನಡೆದರೂ ಮಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ನಗರದ ಪ್ರಮುಖ ಸರ್ಕಲ್‍ಗಳಲ್ಲಿ, ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ. ಕಮೀಷನರ್ ಕಚೇರಿ ಸಮೀಪ ಪೊಲೀಸರ ಜಮಾವಣೆ ನಡೆದು ಆಯಕಟ್ಟಿನ ಸ್ಥಳಗಳಿಗೆ ಪೊಲೀಸರ ಸ್ಥಳಾಂತರ ಮಾಡಲಾಗುತ್ತಿದೆ. ಕಮೀಷನರ್ ಕಚೇರಿಯನ್ನೇ ಭದ್ರತಾ ನಿಯೋಜನೆಗೆ ಸೆಂಟರ್ ಪಾಯಿಂಟ್ ಮಾಡಿಕೊಳ್ಳಲಾಗಿದೆ.
ನಗರಕ್ಕೆ ರ‍್ಯಾಪಿಡ್ ಆಕ್ಷನ್ ಫೋರ್ಸ್ ನ ಎರಡು ತುಕಡಿಗಳ ರವಾನೆ ಮಾಡಿಕೊಳ್ಳಲಾಗಿದೆ. ತಮಿಳುನಾಡಿನ ಅರೆಸೇನಾ ಪಡೆ ಶಸ್ತ್ರಸಜ್ಜಿತವಾಗಿ ಆಗಮಿಸಿದ್ದು, ನಗರ ಮತ್ತು ಸಮಾವೇಶ ಸ್ಥಳದ ಭದ್ರತೆ ನೋಡಿಕೊಳ್ಳಲಿದೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಆರ್‌ಎಎಫ್ ಸೇನೆಯ ನಿಯೋಜನೆ ಮಾಡಲಾಗಿದೆ.
ಕೇರಳ ಪ್ರತಿಭಟನಾಕಾರರ ಮೇಲೆ ನಿಗಾ:
ಮಂಗಳೂರು ಮುಸಲ್ಮಾನರ ಪ್ರತಿಭಟನೆಗೆ ಕೇರಳದಿಂದ ಜನ ಆಗಮಿಸಬಹುದೆಂಬ ಗುಮಾನಿ ಮೇಲೆ ರೈಲ್ವೇ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ವಾಟರ್ ಜೆಟ್ ವಾಹನವೊಂದನ್ನು ಮಂಗಳೂರು ನಗರದಲ್ಲಿ ಕಾಯ್ದಿರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಟರ್ ಜೆಟ್ ವಾಹನವನ್ನು ರವಾನಿಸಲು ಸಿದ್ಧ ಮಾಡಿಕೊಳ್ಳಲಾಗಿದೆ.