ಮಂಗಳೂರು: ದಕ್ಷಿಣ ಕನ್ನಡ ಸಂಸದ ಓರ್ವ ಅಯೋಗ್ಯ ಸಂಸದ, ರಾಜ್ಯದ ಕರಾವಳಿಯ ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಹತ್ಯೆಗಳಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಸಂಸದನಾಗಿದ್ದು ತನ್ನ ಕ್ಷೇತ್ರದ ಅಮಾಯಕ ಬಶೀರ್ ಹತ್ಯೆಯಾಗಿದ್ದರೂ ಕನಿಷ್ಟ ಅವರ ಮನೆಗೆ ಭೇಟಿ ನೀಡಲಾಗದ ಅಯೋಗ್ಯ ಸಂಸದನಾಗಿದ್ದಾನೆ. ಇಂತಹ ಅಯೋಗ್ಯ ಸಂಸದನಿಗೆ ನಾಚಿಕೆಯಾಗಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಮೀದ್ ಖಂದಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಇತ್ತೀಚೆಗೆ ದುಷ್ಕರ್ಮಿಗಳ ಕೋಮು ದ್ವೇಷದಿಂದ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ಸಂತಾಪ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಹಮೀದ್ ಖಂದಕ್, ದೀಪಕ್ ರಾವ್ ಅವರನ್ನು ಹತ್ಯೆಗೈದ ಸಮಯದಲ್ಲಿ ಬಂದ್, ಗಲಾಟೆ, ಉದ್ರೇಕಕಾರಿ ಭಾಷಣಗಳ ಸುರಿಮಳೆಯಾಗಿತ್ತು. ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಸ್ಲಿಮರನ್ನು ಉದ್ರೇಕಿಸುವಂತೆ ದೂರದ ದೆಹಲಿಯಲ್ಲಿ ಕೂತು ಇಲ್ಲಿನ ಪರಿಸ್ಥಿತಿಯನ್ನು ನೋಡದೆ ಮಾಧ್ಯಮಗಳಲ್ಲಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಮೂಲಕ ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದ್ದರು. ಆದರೆ ಬಶೀರ್ ರನ್ನು ಹತ್ಯೆಗೈದಾಗ ಇದ್ಯಾವುದೂ ಇರದೆ ಶಾಂತಿ ಕಾಪಾಡಿಕೊಂಡಿದ್ದರು. ನಮಗೆ ಬೇಕಾಗಿರೋದು ಶಾಂತಿ ಎಂದು ಬಶೀರ್ ಮನೆಯವರು ಹೇಳಿದ್ದನ್ನು ಹಮೀದ್ ಖಂದಕ್ ನೆನಪಿಸಿಕೊಂಡರು. ಈ ಇಬ್ಬರನ್ನು ಕೊಂದವರು ಯಾರು ಹಾಗೂ ಈ ಕೊಲೆಗಳ ಹಿಂದೆ ಇರುವ ಕಾಣದ ಕೈಗಳನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
Advertisement
Advertisement
ಮಾತ್ರವಲ್ಲ ಮುಸ್ಲಿಂ ಸಂಘಟನೆಗಳು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಬಾರದ ಮುಸ್ಲಿಂ ನಾಯಕರನ್ನು ಸಾಮಾಜಿಕವಾಗಿ ಬಹಿಷ್ಕರಿಸಿ. ಚಾನೆಲ್‍ಗಳು ಚರ್ಚೆಗೆಂದು ಕರೆದಾಗ ಓಡೋಡಿ ಬರುವ ಪ್ರಚಾರಪ್ರಿಯ ಮುಸ್ಲಿಂ ನಾಯಕರನ್ನು ಬಹಿಷ್ಕರಿಸಿ. ಅವರು ಎಷ್ಟೇ ದೊಡ್ಡ ನಾಯಕಾರದೂ ಸರಿ ಎಂದು ಕಾರ್ಯಕ್ರಮಕ್ಕೆ ಬಾರದ ಮುಸ್ಲಿಂ ನಾಯಕರ ವಿರುದ್ಧವೂ ಅವರು ಕಿಡಿಕಾರಿದರು.
Advertisement
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಮಾತನಾಡಿ, ಹಿಂದೂ ಮುಸ್ಲಿಮರ ಮಧ್ಯೆ ಗೋಡೆಗಳನ್ನಲ್ಲ ಬದಲಾಗಿ ಅಣೆಕಟ್ಟುಗಳನ್ನು ಕಟ್ಟಿ ರಕ್ತದ ಓಕುಳಿಯನ್ನು ಸಂಘಪರಿವಾರ ಹರಿಸಿ ಸಂಗ್ರಹಿಸಿಡುತ್ತಿದೆ. ಈ ದೇಶದ ಮುಸಲ್ಮಾನರು ದೌರ್ಜನ್ಯಕ್ಕೊಳಗಾದರೂ, ಶೋಷಣೆಗೊಳಗಾದರೂ ಕೂಡ, ಎಲ್ಲಾ ರೀತಿಯ ಸಂವಿಧಾನ ಬದ್ಧವಾದ ಹಕ್ಕುಗಳಿಂದ ವಂಚಿತರಾದರೂ ಕೂಡ ಯಾವತ್ತೂ ಈ ದೇಶದ ವಿರುದ್ಧ ಸಂವಿಧಾನ ವಿರೋಧಿ ಕೆಲಸವನ್ನು ಮಾಡಿಲ್ಲ. ಕರ್ನಾಟಕದಲ್ಲಿ 23 ಹಿಂದುಗಳ ಕೊಲೆಯಾಗಿದೆ ಎಂಬ ಪಟ್ಟಿಯನ್ನು ಶೋಭಾ ಕರಂದ್ಲಾಜೆಯವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಸಂಘಪರಿವಾರದಿಂದ ಕೊಲೆಯಾದ 13 ಹಿಂದುಗಳ ಪಟ್ಟಿಯನ್ನು ಏಕೆ ಕೊಟ್ಟಿಲ್ಲ? ಅದರಲ್ಲೂ ವಿಶೇಷವೇನೆಂದರೆ ಕೊಲೆಯಾದ 13 ಮಂದಿಯ ಪಟ್ಟಿಯಲ್ಲಿ ಜೀವಂತವಿರುವವರ ಹೆಸರೂ ಇದೆ, ಅಪಘಾತದಲ್ಲಿ ಸಾವನ್ನಪ್ಪಿದ್ದವವರ ಹೆಸರೂ ಇದೆ ಹಾಗೂ ಕೌಟುಂಬಿಕ ಕಲಹ ಮತ್ತು ಆಸ್ತಿಗಾಗಿ ಕೊಲೆಯಾದವರ ಹೆಸರೂ ಕೂಡಾ ಈ ಪಟ್ಟಿಯಲ್ಲಿದೆ ಎಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ತನ್ನ ಪ್ರಥಮ ದಿನಂದಿಂದ ಇವತ್ತಿನವರೆಗೆ ಹಿಂದೂಗಳ ವಿರುದ್ಧ ಅಥವಾ ಸಂವಿಧಾನದ ವಿರುದ್ಧ ಮಾತನಾಡಿದ ಬಗ್ಗೆ ಪುರಾವೆ ಸಮೇತ ತೋರಿಸಲು ಸಂಘ ಪರಿವಾರಕ್ಕೆ ಸಾಧ್ಯವಿದೆಯೇ? ಪಾಪ್ಯುಲರ್ ಫ್ರಂಟ್ ನ ಹೋರಾಟ ಈ ದೇಶದ ದೌರ್ಜನ್ಯಕ್ಕೊಳಗಾದವರ ಪರವಾಗಿ ಹಾಗೂ ಈ ದೇಶದ ಸಂವಿಧಾನ ವಿರೋಧಿಗಳಾದ ಹಾಗೂ ದೇಶದ ಆಂತರಿಕ ಶತ್ರುಗಳಾದ ಭಯೋತ್ಪಾದಕ ಆರ್‍ಎಸ್‍ಎಸ್ ವಿರುದ್ಧವಾಗಿದೆ. ನಮ್ಮ ಕೊನೆಯ ಉಸಿರಿರುವ ತನಕ ಸಂಘ ಪರಿವಾರದ ವಿರುದ್ಧ ಹೋರಾಡಲು ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅತಿಥಿಯೊಬ್ಬರು, ಈ ಸಂತಾಪ ಸಭೆಯು ಕೊನೆಯ ಸಂತಾಪ ಸಭೆಯಾಗಲಿ ಎಂದು ಆಶಿಸಿದರು. ನೆಹರೂ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆ ಹಾಗೂ ಸಂಘಟನೆಗಳ ಹಲವಾರು ನಾಯಕರು ಉಪಸ್ಥಿತರಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.