ವಾಷಿಂಗ್‍ಟನ್: ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾರ್ವಜನಿಕ ಈಜುಕೊಳಕ್ಕೆ ಆಗಮಿಸಿದ್ದ ಮುಸ್ಲಿಂ ಹೆಣ್ಣು ಮಕ್ಕಳು ಹಾಗೂ ಅವರ ಮಹಿಳಾ ತರಬೇತಿದಾರರನ್ನು ಹೊರಹಾಕಿರುವ ಘಟನೆ ಅಮೇರಿಕಾದ ವಿಲ್ಮಿಂಗ್ಟನ್ ನಗರದಲ್ಲಿ ನಡೆದಿದೆ.
ತಹಶೀನ್ ಎ ಇಸ್ಮಾಯಿಲ್ ಎಂಬ ಮಹಿಳಾ ಈಜು ತರಬೇತಿ ಶಿಕ್ಷಕಿಯು ಬೇಸಿಗೆಯ ಅವಧಿಯ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಕೆಲ ಮುಸ್ಲಿಂ ಹೆಣ್ಣು ಮಕ್ಕಳನ್ನು ವಿಲ್ಮಿಂಗ್ಟನ್‍ನಲ್ಲಿರುವ ಫೋಸ್ಟರ್ ಬ್ರೌನ್ ಸಾರ್ವಜನಿಕ ಈಜುಕೊಳದಿಂದ ಹೊರಹಾಕಿದ್ದಾರೆ. ಅಂದಹಾಗೇ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಿಗಳಿಗೆ ತರಬೇತಿ ನೀಡುಲು ತಹಶೀನ್ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ಸಮಸ್ಯೆ ಎದುರಿಸಿದ್ದಾರೆ ಎಂದು ಹೇಳಿದ್ದಾರೆ.
ತರಬೇತಿಗೆ ಬಂದ ಮಕ್ಕಳೆಲ್ಲ ಶರ್ಟ್, ಶಾರ್ಟ್ಸ್ ಹಾಗೂ ಹಿಜಬ್‍ಗಳನ್ನು ಧರಿಸಿದ್ದರು. ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟ ಕಾರಣಕ್ಕೆ ಈಜುಕೊಳದ ಮ್ಯಾನೇಜರ್ ಮಕ್ಕಳಿಗೆ ಈಜಲು ಅನುಮತಿ ನೀಡದೆ, ಮಕ್ಕಳು ಹಾಗೂ ತರಬೇತಿ ಶಿಕ್ಷಕಿಯನ್ನು ಸ್ಥಳದಿಂದ ಹೋಗಲು ತಿಳಿಸಿದ್ದರು. ಕಾರಣ ಕೇಳಿದ ವೇಳೆ ಸಾರ್ವಜನಿಕ ಈಜುಕೊಳದಲ್ಲಿ ಕಾಟನ್ ಬಟ್ಟೆಗಳನ್ನು ಧರಿಸಿ ಈಜುವುದು ನಗರ ನೀತಿಯ ವಿರುದ್ಧವಾಗಿದೆ ಎಂದು ಹೇಳಿದ್ದು, ಆದರೆ ಇತರೇ ಮಕ್ಕಳು ಸಹ ಕಾಟನ್ ಬಟ್ಟೆ ಧರಿಸಿದ್ದರು. ಆದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಈ ನಿಯಮ ಅನುಸರಿಸಿದ್ದಾರೆ ಎಂದು ಮ್ಯಾನೇಜರ್ ವಿರುದ್ಧ ತಹಶೀನ್ ಆರೋಪ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲೇ ತಹಶೀನ್ ಈಜುಕೊಳದ ಮ್ಯಾನೇಜರ್ ರನ್ನು ಪ್ರಶ್ನಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರ ಸಹಾಯ ಪಡೆದು ಹೊರ ಕಳುಹಿಸಿದ್ದಾರೆ. ಸದ್ಯ ಈ ಕುರಿತು ಸ್ಪಷ್ಟನೆ ನೀಡಿರುವ ಮ್ಯಾನೇಜರ್ ಕಾಟನ್ ಬಟ್ಟೆ ಧರಿಸುವುದರಿ ಈಜುವುದರಿಂದ ಬಟ್ಟೆ ನೀರಿನಲ್ಲಿ ಭಾರವಾಗುತ್ತದೆ. ಅಲ್ಲದೇ ಈಜುಕೊಳದ ಸ್ವಚ್ಚತೆ ಹಾಳಾಗುತ್ತದೆ ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನಗರದ ಮೇಯರ್ ಪರ್ಜಿಕಿ, ಮುಸ್ಲಿಂ ಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿದ್ದಕ್ಕೆ ಅವರನ್ನು ಈಜುಕೊಳದಿಂದ ಹೊರ ಕಳುಹಿಸಲಾಯಿತು ಎಂಬ ಸುದ್ದಿ ಸುಳ್ಳು. ಕಾಟನ್ ಬಟ್ಟೆ ತೊಟ್ಟು ಈಜುಕೊಳದಲ್ಲಿ ಇಳಿಯುವುದನ್ನು ನಿಷೇಧಿಸಿರುವ ಕಾರಣಕ್ಕೆ ಈಜಲು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಸದ್ಯ ಮಕ್ಕಳನ್ನು ಸ್ಥಳದಿಂದ ಹೊರ ಕಳುಹಿಸಿದಕ್ಕೆ ಕ್ಷಮೆ ಕೋರಿದ್ದು, ಎಲ್ಲರೂ ನಗರದ ನಿಯಮಗಳಂತೆ ನಡೆದುಕೊಳ್ಳಬೇಕು. ಅದು ನಮ್ಮ ಕರ್ತವ್ಯ. ಆದರೆ ನಿಯಮ ಪಾಲಿಸುವ ಬರಾಟೆಯಲ್ಲಿ ಸಾಮಾನ್ಯ ಜ್ಞಾನವಿಲ್ಲದೆ ವರ್ತಿಸಿದ್ದು ನಮ್ಮ ತಪ್ಪು ಎಂದು ಮೇಯರ್ ಹೇಳಿದ್ದಾರೆ.