– ಏನಿದು ಹೊಸ ಇವಿ ನೀತಿ?
ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಹಾಗೂ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಭಾರತದಲ್ಲಿ ಉದ್ಯಮಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಇನ್ನೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Cars) ಕಂಪನಿ ತೆರೆಯಲು ಎಲೋನ್ ಮಸ್ಕ್ (Elon Musk) ಒಡೆತನದ ಟೆಸ್ಲಾ ಸಹ ಮನಸ್ಸು ಮಾಡಿದೆ. ಈ ಬಗ್ಗೆ ಚರ್ಚೆಯಾಗುತ್ತಿದ್ದು, ಭಾರತದ ರಿಲಯನ್ಸ್ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ. ತೆಲಂಗಾಣ, ಗುಜರಾತ್ ಅಥವಾ ತಮಿಳುನಾಡಿನಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಜಾಗ ನೋಡಲು ಟೆಸ್ಲಾ ತಂಡವು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿತ್ತು. ಇದೀಗ ನಿಗದಿಯಾದ ದಿನಾಂಕ ಮುಂದೆ ಹಾಕಲಾಗಿದೆ.
Advertisement
ಟೆಸ್ಲಾ (Tesla) ಮಸ್ಕ್ ಅವರ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾಗಿದ್ದು, ಅಮೆರಿಕ ಮತ್ತು ಚೀನಾದಲ್ಲಿ ಮಾರಾಟದ ನಿಧಾನಗತಿಯ ಮಧ್ಯೆ ಹೊಸ ಮಾರುಕಟ್ಟೆಗಳನ್ನು ಹುಡುಕಾಟದಲ್ಲಿದೆ. ಭಾರತವು ಟೆಸ್ಲಾಗೆ ಸಂಭಾವ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಸ್ಥಳೀಯವಾಗಿ ಹೂಡಿಕೆ ಮಾಡುವ ಕಂಪನಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಎಲೆಕ್ಟ್ರಿಕ್ ಕಾರುಗಳ ಉತ್ಪಾದನ ಘಟಕ ಆರಂಭಿಸಲು ಟೆಸ್ಲಾ ಮುಂದಾಗಿದೆ.
Advertisement
Advertisement
ಕೇಂದ್ರ ಸರ್ಕಾರ ಆಮದು ಮಾಡಿಕೊಂಡ ಕಾರುಗಳ ಮೇಲಿನ ತೆರಿಗೆಗಳನ್ನು ಸರ್ಕಾರ ಕಡಿಮೆ ಮಾಡಿದ ನಂತರ ಭಾರತದಲ್ಲಿಕಾರುಗಳ ಮಾರುಕಟ್ಟೆ ಸ್ಥಾಪನೆಗೆ ಟೆಸ್ಲಾ ಯೋಚಿಸಿದೆ. ಇದೇ ಕಾರಣಕ್ಕೆ ಟೆಸ್ಲಾ ಸಂಸ್ಥೆ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಲು ಹವಣಿಸುತ್ತಿದೆ. ಟೆಸ್ಲಾ ಮಾತ್ರವಲ್ಲದೇ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕೂಡ ಭಾರತದಲ್ಲಿ ಸೇವೆ ನೀಡಲು ಮುಂದಾಗಿದ್ದು ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ
Advertisement
ಭಾರತ ಪ್ರವಾಸ ಮುಂದೂಡಿದ ಮಸ್ಕ್
ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಎಲೋನ್ ಮಸ್ಕ್ ಇದೀಗ ತಮ್ಮ ಈ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೃಢಪಡಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅವರು ಭಾರತಕ್ಕೆ ಬರುವ ಸಾಧ್ಯತೆ ಇದೆ. ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ 2500 ಕೋಟಿ ರೂ. (2ರಿಂದ 3 ಬಿಲಿಯನ್ ಡಾಲರ್) ಹೂಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಮಸ್ಕ್ ಅವರ ಸ್ಯಾಟಲೈಟ್ ಇಂಟರ್‌ನೆಟ್ ಸೇವೆ ಸ್ಟಾರ್‌ಲಿಂಕ್ ಪ್ರವೇಶವನ್ನು ಘೋಷಿಸುವ ಸಾಧ್ಯತೆ ಇದೆ.
ಟೆಸ್ಲಾದಿಂದ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ
ಟೆಸ್ಲಾ ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿ ತಂತ್ರಜ್ಞಾನಗಳು ಗುಣಮಟ್ಟಗಳು ಭಾರತೀಯ ಗ್ರಾಹಕರನ್ನು ಸೆಳೆಯಲಿದೆ. ಭವಿಷ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಟೆಸ್ಲಾ ಇವಿ ಲಭ್ಯವಾಗುವ ಸಾಧ್ಯತೆ ಇದೆ. ಜಾಗತಿಕ ಬ್ರ್ಯಾಂಡ್ ಭಾರತಕ್ಕೆ ಪ್ರವೇಶ ಮಾಡುವುದರಿಂದ ಇವಿ ಮಾರುಕಟ್ಟೆ ಮುನ್ನಡೆಸುವ ಜೊತೆಗೆ ವಿಸ್ತರಣೆಗೆ ಕಾರಣವಾಗಲಿದೆ. ಭಾರತದಲ್ಲಿ 2030ರ ಹೊತ್ತಿಗೆ ಮಾರುಕಟ್ಟೆ ಮೌಲ್ಯ 40%ರಷ್ಟು ಹೆಚ್ಚಲಿದೆ. ಇದರಿಂದಾಗಿ ಉತ್ಪಾದನೆ ಮತ್ತು ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಸಹ ಸೃಷ್ಟಿಯಾಗಲಿದೆ.
ಮೂಲಗಳ ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ಎರಡೂ ರಾಜ್ಯ ಸರ್ಕಾರಗಳು ಟೆಸ್ಲಾಗೆ ಭೂಮಿ ನೀಡಲು ಮುಂದೆ ಬಂದಿವೆ. ಇದು ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಲ್ಯಾಂಡ್‍ಸ್ಕೇಪ್‍ನಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಪ್ರಸ್ತಾವಿತ ಉತ್ಪಾದನಾ ಘಟಕವು ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಕ್ರಮವು ಭಾರತದ ಹೊಸ ಇವಿ ನೀತಿಯೊಂದಿಗೆ ಹೊಂದಿಕೆಯಾಗುತ್ತದೆ. ಇದು ಸುಸ್ಥಿರ ಸಾರಿಗೆ ಉತ್ತೇಜಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ.
ಏನಿದು ಹೊಸ ಇವಿ ನೀತಿ
ಸರ್ಕಾರದ ಇವಿ ಯೋಜನೆಯಡಿ ಭಾರತವನ್ನು ಇವಿ ಕಾರು ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವ ಗುರಿಯನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನವನ್ನು ಹೊಂದಿದ ಇವಿಗಳ ಉತ್ಪಾದನಾ ತಾಣವಾಗಿ ಭಾರತ ಹೆಸರು ಮಾಡಲಿದೆ. ಜಾಗತಿಕ ತಯಾರಕರಿಂದ ಹೂಡಿಕೆಗಳನ್ನು ಆಕರ್ಷಿಸುವುದು, ಭಾರತೀಯ ಗ್ರಾಹಕರಲ್ಲಿ ಸುಧಾರಿತ ತಂತ್ರಜ್ಞಾನದ ಅಳವಡಿಕೆ ಹೆಚ್ಚಿಸುವುದು. ದೇಶದ ಮೇಕ್ ಇನ್ ಇಂಡಿಯಾ ಮತ್ತಷ್ಟು ವಿಸ್ತರಿಸುವುದು ಹಾಗೂ ಉತ್ತೇಜಿಸುವುದು ಹೊಸ ಇವಿ ನೀತಿಯ ಉದ್ದೇಶವಾಗಿದೆ.
ಹೊಸ ನೀತಿಯಡಿ ಕಂಪನಿಗಳು ದೇಶದಲ್ಲಿ ಕನಿಷ್ಠ 4,150 ಕೋಟಿ ರೂ. ಹೂಡಿಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸ್ಥಳೀಯವಾಗಿ ಕನಿಷ್ಠ 25%ರಷ್ಟು ಬಿಡಿಭಾಗಗಳನ್ನು ಸಂಗ್ರಹಿಸುವುದನ್ನೂ ಕಡ್ಡಾಯ ಮಾಡಲಾಗಿದ್ದು, ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಟೆಸ್ಲಾದ ಮಾರುಕಟ್ಟೆ ಪ್ರವೇಶ ಸುಲಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಅವಶ್ಯಕತೆಗಳನ್ನು ಪೂರೈಸುವ ಕಂಪನಿಗಳು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳನ್ನು ಕೇವಲ 15%ರಷ್ಟು ಆಮದು ಸುಂಕದಲ್ಲಿ ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ವರ್ಷಕ್ಕೆ 8,000 ಇವಿಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಸದ್ಯ ಭಾರತವು ಆಮದು ಮಾಡಿದ ಕಾರುಗಳ ಮೇಲೆ ಅವುಗಳ ಮೌಲ್ಯವನ್ನು ಅವಲಂಬಿಸಿ 70%ರಿಂದ 100%ರಷ್ಟು ತೆರಿಗೆಯನ್ನು ವಿಧಿಸುತ್ತಿದೆ.
ಹೊಸ ಇವಿ ನೀತಿಯ ಮುಖ್ಯಂಶಗಳು
* ಕನಿಷ್ಠ ಹೂಡಿಕೆ: 4,150 ಕೋಟಿ ರೂ., ಗರಿಷ್ಠ ಹೂಡಿಕೆಯ ಮೇಲೆ ಯಾವುದೇ ಮಿತಿಯಿಲ್ಲ.
* ಉತ್ಪಾದನೆ ಗಡುವು: ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 3 ವರ್ಷ ಮತ್ತು ಇ-ವಾಹನಗಳ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಹಾಗೂ 50%ರಷ್ಟು ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ) ಅನ್ನು ಸಾಧಿಸಲು ಗರಿಷ್ಠ 5 ವರ್ಷಗಳು.
* ಉತ್ಪಾದನೆಯ ಸಮಯದಲ್ಲಿ ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ): 3ನೇ ವರ್ಷಕ್ಕೆ 25 %ಮತ್ತು 5ನೇ ವರ್ಷದಲ್ಲಿ 50%ರಷ್ಟು ಸ್ಥಳೀಯ ಬಿಡಿಭಾಗಗಳ ಸಂಗ್ರಹವನ್ನು ಸಾಧಿಸಬೇಕು.
* 15%ರಷ್ಟು ಕಸ್ಟಮ್ಸ್ ಸುಂಕ ವಿನಾಯಿತಿಯು 3ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಾಹನದ ಮೇಲೆ ಒಟ್ಟು 5 ವರ್ಷಗಳ ಅವಧಿಗೆ ಅನ್ವಯವಾಗುತ್ತದೆ. ಇದಕ್ಕಾಗಿ ತಯಾರಕರು 3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಬೇಕಾಗುತ್ತದೆ.
* 800 ಮಿಲಿಯನ್ ಡಾಲರ್ ಅಂದರೆ 6,630 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಹೂಡಿಕೆ ಮಾಡಿದಲ್ಲಿ ವರ್ಷಕ್ಕೆ ಗರಿಷ್ಠ 8,000ದಂತೆ 40,000 ಇವಿಗಳ ಆಮದಿಗೆ ಅನುಮತಿ ನೀಡಲಾಗುತ್ತದೆ. ಸುಂಕ ವಿನಾಯಿತಿ ಮೊತ್ತವು ಮಾಡಿದ ಹೂಡಿಕೆ ಅಥವಾ 6,484 ಕೋಟಿ ರೂ. (ಪಿಎಲ್‍ಐ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ) ನಡುವೆ ಯಾವುದು ಕಡಿಮೆಯೋ ಅದಕ್ಕೆ ಸೀಮಿತವಾಗಿರುತ್ತದೆ.
* ಆಮದು ಸುಂಕ ವಿನಾಯಿತಿಗೆ ಬದಲಾಗಿ ಕಂಪನಿಯು ಮಾಡುವ ಹೂಡಿಕೆಯ ಬದ್ಧತೆಗೆ ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ.
* ಯೋಜನೆಯ ಮಾರ್ಗಸೂಚಿಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಡಿವಿಎ ಮತ್ತು ಕನಿಷ್ಠ ಹೂಡಿಕೆ ಮಾನದಂಡಗಳನ್ನು ಸಾಧಿಸದಿದ್ದಲ್ಲಿ ಬ್ಯಾಂಕ್ ಗ್ಯಾರಂಟಿಯನ್ನು ವಶಕ್ಕೆ ಪಡೆಯಲಾಗುತ್ತದೆ.
*ಸ್ಥಳೀಯವಾಗಿ ಕನಿಷ್ಠ 25%ರಷ್ಟು ಬಿಡಿಭಾಗಗಳನ್ನು ಸಂಗ್ರಹಿಸುವುದನ್ನೂ ಕಡ್ಡಾಯ ಮಾಡಿದ ಸರ್ಕಾರ
*ಹೀಗೆ ಮಾಡಿದಲ್ಲಿ ಕೇವಲ 15%ರಷ್ಟು ಆಮದು ಸುಂಕ ನೀಡಿ ಕಾರುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ