Connect with us

Chikkaballapur

ಕೊರೊನಾ ಎಫೆಕ್ಟ್ – ಮಾದರಿ ರೈತನ ಕಣ್ಣೆದುರೇ ಮಣ್ಣುಪಾಲಾಗ್ತಿದೆ ಕರ್ಬೂಜ ಬೆಳೆ

Published

on

ಚಿಕ್ಕಬಳ್ಳಾಪುರ: ಬರದನಾಡು ಜಿಲ್ಲೆಯ ಬಾಗೇಪಲ್ಲಿ ತಾಲೂಕು ಮಾಡಪ್ಪಲ್ಲಿ ಗ್ರಾಮದಲ್ಲಿ ಭರ್ಜರಿ ಕರ್ಬೂಜ ಹಣ್ಣು ಬೆಳೆದ ರೈತ ಗಂಗಿರೆಡ್ಡಿ ಬಹಳಷ್ಟು ಲಾಭದ ನಿರೀಕ್ಷೆಯಲ್ಲಿ ಇದ್ದರು. ಆದರೆ ಕರ್ಬೂಜ ಕಾಯಿ ಹಣ್ಣಾಗ ತೊಡಗುತ್ತಿದ್ದಂತೆ ಕೊರೊನಾ ವೈರಸ್‍ನ ಆತಂಕ ಮೂಲೆಮೂಲೆಗೂ ಹಬ್ಬಿತು. ಇದರಿಂದಾಗಿ ಅತ್ತ ಬೆಳೆಯ ನಿರ್ವಹಣೆಗೆ ಕೂಲಿಯಾಳುಗಳು ಸಿಗಲಿಲ್ಲ, ಇತ್ತ ಮಾರುಕಟ್ಟೆಗೆ ತಲುಪಿಸಲು ಸಾರಿಗೆ ಸಮಸ್ಯೆಯಾಗಿ ರೈತ ಕಂಗಾಲಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರೈತ ಬೆಳೆದ ಕರ್ಬೂಜ ಹಣ್ಣುಗಳು ಜಮೀನಿನಲ್ಲೇ ಮಾಗಿ ಕೊಳೆಯುತ್ತಿದ್ದು, ಸುತ್ತಲಿನ ಗ್ರಾಮಸ್ಥರು ಒಂದಿಷ್ಟು ಉಚಿತವಾಗಿ ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಸಾಲಸೋಲ ಮಾಡಿ ಲಕ್ಷಾಂತರ ರೂಪಾಯಿಗಳ ಬಂಡವಾಳವನ್ನು ಬೆಳೆಯ ಮೇಲೆ ಹಾಕಿ, ಕಟಾವಿನ ಸಮಯದಲ್ಲಿ ಕೊರೊನಾ ಭೀತಿಯಿಂದ ರೈತ ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಬೆಳೆಗಾಗಿ ಸಾಲ ಮಾಡಿ ಮಾದರಿ ರೈತನಾಗಬೇಕು ಎಂದು ಹಗಲು, ರಾತ್ರಿ ದುಡಿದೆ. ಕೃಷಿ ತಜ್ಞರ ಸಲಹೆಗಳನ್ನು ಪಡೆದು, ಚಾಚೂ ತಪ್ಪದೆ ಕರ್ಬೂಜ ಬೆಳೆಯನ್ನು ಅಚ್ಚುಕಟ್ಟಾಗಿ ಬೆಳೆದು ತೋಟಗಾರಿಕಾ ವಿಜ್ಞಾನಿಗಳಿಂದ ಭೇಷ್ ಎನಿಸಿಕೊಂಡಾಗ ಉತ್ತಮ ಲಾಭ ಬರುತ್ತೆ, ಮಾಡಿದ ಸಾಲವೆಲ್ಲಾ ತೀರಿಸಬಹುದು ಎಂದುಕೊಂಡೆ. ಆದರೆ ಬೆಳೆ ಕಟಾವಿನ ಸಮಯದಲ್ಲಿ ಈ ಕೊರೊನಾದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಗಂಗಿರೆಡ್ಡಿ ಅಳಲನ್ನು ತೋಡಿಕೊಂಡಿದ್ದಾರೆ.

ನಾನು ಮತ್ತು ನಮ್ಮ ತಂದೆ ಕರ್ಬೂಜ ಬೆಳೆಯು ಬೇಸಿಗೆ ಸಮಯಕ್ಕೆ ಸರಿಯಾಗಿ ಕಟಾವಿಗೆ ಬರುವಂತೆ ಲೆಕ್ಕಾಚಾರ ಮಾಡಿ ಸಾಲ ಮಾಡಿಕೊಂಡು ಹಣ್ಣು ಬೆಳೆದೆವು. ಆದರೆ ಈ ರೀತಿ ಹೊಡೆತ ಬೀಳುತ್ತದೆ ಎಂದು ಊಹಿಸಿರಲಿಲ್ಲ. ಸುಮಾರು ಒಂದೂವರೆ ಲಕ್ಷದವರೆಗೂ ನಷ್ಟವಾಗಿದ್ದು, ಸರ್ಕಾರ ನಷ್ಟ ಪರಿಹಾರ ನೀಡಿದರೆ ಉತ್ತಮವಾಗಿರುತ್ತದೆ. ನಮ್ಮಂತಹ ರೈತ ಕುಟುಂಬದ ನೋವಿಗೆ ಬೆಂಬಲವಾಗಿ ನಿಂತಂತಾಗುತ್ತದೆ ಎಂದು ರೈತ ಗಂಗಿರೆಡ್ಡಿ ಅವರ ಮಗ ಗೋವರ್ಧನರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ರೈತ ಗಂಗಿರೆಡ್ಡಿ, ಗೋವರ್ಧನ ರೆಡ್ಡಿಯವರ ಜಮೀನಿಗೆ ಕ್ಷೇತ್ರ ಅಧ್ಯಯನಕ್ಕಾಗಿ ಬಂದಿದ್ದರು. ಸುಮಾರು ಐದು ಹೆಕ್ಟೇರ್ ನಲ್ಲಿ ಭರ್ಜರಿ ಅರ್ಕಾಸಿರಿ ಕರ್ಬೂಜ ಬೆಳೆಯನ್ನು ಕಂಡು ಹಿರಿಯ ಕೃಷಿ, ತೋಟಗಾರಿಕ ವಿಜ್ಞಾನಿಗಳು ಕಿರಿಯರಿಗೆ ಮಾದರಿ ರೈತನನ್ನು ಪ್ರತ್ಯಕ್ಷವಾಗಿ ಪರಿಚಯಿಸಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು. ಆದರೆ ಈಗ ಕರ್ಬೂಜ ಬೆಳೆ ಕಣ್ಣೆದುರೇ ಮಣ್ಣುಪಾಲಾಗ್ತಿರೋದು ರೈತರ ಅಳಲಿಗೆ ಕಾರಣವಾಗಿದೆ.

Click to comment

Leave a Reply

Your email address will not be published. Required fields are marked *