ರವೀಶ್ ಎಚ್.ಎಸ್
ಅಂದೊಂದಿತ್ತು ಕಾಲ.. ಡುರ್ರ್.. ಡುರ್ರ್.. ಅಂತಾ ಸೌಂಡ್ ಮಾಡ್ಕೊಂಡು ಅಂಬಾಸಿಡರ್ ಕಾರು ಬರ್ತಿದ್ರೆ, ಆ ಜನ ವಿಮಾನ ಬಂದಷ್ಟೇ ಕುತೂಹಲದಿಂದ ಕಾರು ನೋಡಲು ರಸ್ತೆಬದಿ ಇಕ್ಕೆಲಗಳಲ್ಲಿ ನಿಂತಿರುತ್ತಿದ್ರು. ಆ ಊರುಗಳ ಜನರ ಮುಖಕ್ಕೆ ಪೌಡರ್ ಹಾಕೋ ಥರಾ ಧೂಳು ಮೆತ್ತಿರುತ್ತಿತ್ತು. ಕಲ್ಲು ಮಣ್ಣಿನ ರಸ್ತೆಗಳ ಊರುಗಳಲ್ಲಿ ಧೂಳು ಮೆತ್ತಿಕೊಂಡ ಜನರಿಗೆ ಕೈ ಮುಗಿದು ನಮಿಸ್ತಿದ್ರು. ಆ ಕಾಲ ಈಗ ಸರಿದು ಹೋಗಿದೆ. ನುಣುಪಾದ ಕೆನ್ನೆಯಂತಹ ರಸ್ತೆಗಳು ರೆಡಿಯಾಗಿವೆ. ಡುರ್ರ್ ಡುರ್ರ್ ಸೌಂಡ್ ಹೋಗಿ ಸೌಂಡೇ ಬಾರದ ಹವಾನಿಯಂತ್ರಿತ ಐಷಾರಾಮಿ ಕಾರುಗಳಲ್ಲಿ ಜನನಾಯಕರು ರಾರಾಜಿಸುತ್ತಿದ್ದಾರೆ. ಇಷ್ಟೊಂದು ಜಗದ ಬದಲಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಆಯ್ಕೆ ಬದಲಾಗಲಿಲ್ಲವಾ..? ಈ ಪ್ರಶ್ನೆಯನ್ನ ಕಾರ್ಯಕರ್ತರನೊಬ್ಬ ಕೇಳಿದ್ದು ನನಗೆ ಆಶ್ಚರ್ಯ ತಂದಿತ್ತು.
Advertisement
ಅಂದಹಾಗೆ ಅಂಬಾಸಿಡರ್ ಕಾರಿನಲ್ಲಿ ದಿವಂಗತ ದೇವರಾಜ ಅರಸರು ಹಳ್ಳಿ ಹಳ್ಳಿಗಳನ್ನ ಸುತ್ತುವಾಗ ಇದೇ ಸ್ಥಿತಿ ಇತ್ತು. ಈ ಮಾತನ್ನ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಒಂದು ಸಾರಿ ಹೇಳಿದ್ದ ನೆನಪು. ಕಾರು ಪಂಕ್ಚರ್ ಆದಾಗ ಅವರು ಪಟ್ಟ ಕಷ್ಟದ ಬಗ್ಗೆಯೂ ಖರ್ಗೆ ಅವರು ಆಗಾಗ್ಗೆ ಮೆಲಕು ಹಾಕ್ತಾರೆ. ಆದ್ರೆ ಈಗ ದೇವರಾಜು ಅರಸು ಅವರು ಇಲ್ಲ. ಮಲ್ಲಿಕಾರ್ಜುನ ಖರ್ಗೆ ಇನ್ನು ಕಾಂಗ್ರೆಸ್‍ನಲ್ಲಿ ಗೌರವಯುತವಾದ ಸ್ಥಾನದಲ್ಲಿದ್ದಾರೆ. ನಾಯಕತ್ವದ ವಿಚಾರವಾಗಿಯೂ ಖರ್ಗೆ ಅಭಿಪ್ರಾಯ ಮಂಡಿಸಿದ್ದಾರೆ. ಅಂತಹ ಪಕ್ಷದಲ್ಲಿ ನಾಯಕತ್ವ ಆಯ್ಕೆ ಬಂದಾಗ ಆಗಲೂ ಅದೇ ವ್ಯವಸ್ಥೆ, ಈಗಲೂ ಅದೇ ವ್ಯವಸ್ಥೆ ಅಂದ್ರೆ ಹೇಗೆ..? ಅನ್ನೋದಷ್ಟೇ ಇಲ್ಲಿ ವಿಶ್ಲೇಷಣಾ ವಸ್ತು ಅಂದ್ರೂ ತಪ್ಪಾಗಲಾರದು.
Advertisement
ಕಾಂಗ್ರೆಸ್‍ನದ್ದು ಬಿದ್ದಾಗ ಎದ್ದೇಳಲು ಹೆದರುವ ಬಲಹೀನತೆನಾ..? ಆ ಭಯದಲ್ಲಿ ಬಲಿತ ಕೈಗಳು ಸೋತು ಬಿಡುತ್ವಾ..? ಹಾಗೆ ಸೋತ ಕೈಗಳು ನಿರ್ಧಾರಗಳಲ್ಲಿ ಎಡವುತ್ವಾ.? ಇಂತಹ ಪ್ರಶ್ನೆಗಳು 2014ರಿಂದ ಹೆಚ್ಚಾಗಿ ಪುಟಿದೇಳುತ್ತಿವೆ. ಆದ್ರೆ ಉತ್ತರ ಮಾತ್ರ ಸಿಗ್ತಿಲ್ಲ. ಉದಾಹರಣೆಗೆ ಕೆಪಿಸಿಸಿ ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ನಡೆದುಕೊಳ್ತಿರುವ ರೀತಿಯನ್ನೇ ಗಮನಿಸಬಹುದು. ಹೈಕಮಾಂಡ್ ಟೋಪಿ ಒಬ್ಬರ ತಲೆಗೆ ಬರುವ ತನಕವೂ ಹೇಳೋದಕ್ಕೆ ಆಗಲ್ಲ, ಕಡೇ ಕ್ಷಣದಲ್ಲಿ ಟೋಪಿ ಯಾರಿಗೆ ಹಾಕ್ತಾರೋ ಅಂತಾ ಸ್ವತಃ ಡಿಕೆಶಿಯೇ ಒಂದು ಸಲ ಹೇಳಿದ್ರು. ಈ ರೀತಿಯ ದೊಡ್ಡ ಪಕ್ಷದಲ್ಲಿ ಮ್ಯೂಸಿಕಲ್ ಚೇರ್ ಆಡಿಸುವ ರೀತಿ ಕ್ಯಾಪ್ಟನ್ ಟೋಪಿ ಹಾಕುವುದು ಲಾಸ್ಟ್ ಗೇಮ್ ಆಗಬಾರದು ಅಲ್ವಾ..? ಅನ್ನೋದು ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆ.
Advertisement
Advertisement
ಈ ಹಿಂದೆ ಕಾಂಗ್ರೆಸ್‍ನಲ್ಲಿ ಹಲವು ಸಲ ಹೀಗೆ ನಾಯಕತ್ವ ವಿಚಾರದಲ್ಲಿ ಸರ್ಕಸ್ ನಡೆದಿವೆ. 1994ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿ ಒದ್ದಾಡುತ್ತಿತ್ತು. ಆದ್ರೆ ಅಧಿಕಾರದ ಉತ್ತುಂಗದಲ್ಲಿ ಇರುವಾಗಲೇ ಜನತಾದಳ ಒಡೆದು ಚೂರಾಗುತ್ತೆ. ಆ ಸಂದರ್ಭದಲ್ಲಿ ಧರಂಸಿಂಗ್ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ. ವಾರ್ ಟೈಮ್ ನಲ್ಲಿ ಪೀಸ್ ಪ್ರೆಸಿಡೆಂಟ್‍ಗಿಂತ ವಾರ್ ಪ್ರೆಸಿಡೆಂಟ್ ಬೇಕು ಅನ್ನೋ ಕೂಗು ಶುರುವಾಗುತ್ತೆ. ಅದರಲ್ಲೂ ಪ್ರಬಲ ಸಮುದಾಯದ ನಾಯಕನೊಬ್ಬನ ಸೃಷ್ಟಿ ಕಾಂಗ್ರೆಸ್‍ಗೆ ಅನಿವಾರ್ಯವಾಗಿರುತ್ತೆ. ಆಗಲೂ ನಾಯಕತ್ವ ಬದಲಾವಣೆಗೆ, ಹೊಸ ನಾಯಕನ ಸೃಷ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಎಸ್.ಎಂ.ಕೃಷ್ಣ ಹೆಸರು ಬಂದರೂ, ಸೋನಿಯಾಗೆ ಕೃಷ್ಣ ಹತ್ತಿರವಿದ್ದರೂ ಕೆಪಿಸಿಸಿ ಅಧ್ಯಕ್ಷ ಗಾದಿ ಅಷ್ಟು ಈಸಿಯಾಗಿ ಸಿಗಲಿಲ್ಲ. ಅವರೊಬ್ಬ ಟೆನ್ನಿಸ್ ಕೃಷ್ಣ ಅಂತಾ ಚಾಡಿ ಹೇಳಿದ ಬಣಗಳು ಆಗಲೂ ಇತ್ತು. ಕಡೆಗೆ ಅಳೆದು ತೂಗಿ 1999 ಫೆಬ್ರವರಿಯಲ್ಲಿ ಎಸ್‍ಎಂಕೆರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡ್ತಾರೆ.
ಅಂದಹಾಗೆ ಆಗ ಇದ್ದ ಪರಿಸ್ಥಿತಿ ಈಗಲೂ ಕಾಂಗ್ರೆಸ್‍ಗೆ ಇದೆ. ಸದ್ಯ ಅಧಿಕಾರವಿಲ್ಲದ ಕಾಂಗ್ರೆಸ್ ಮುಂದಿನ ಮೂರುಕಾಲು ವರ್ಷ ಬೆಟ್ಟದಷ್ಟು ಕಸರತ್ತು ನಡೆಸಬೇಕಿದೆ. ಪದೇ ಪದೇ ಮಹಾಭಾರತದ ಕತೆ ಹೇಳುವ ಡಿಕೆಶಿಯೇ ಈಗ ನಾಯಕತ್ವದ ರೇಸ್‍ನಲ್ಲಿರುವ ಮೊದಲ ಕುದುರೆ. ಆ ಕುದುರೆಯನ್ನ ಕಟ್ಟಿ ಹಾಕಲು ಅವರದ್ದೇ ಪಕ್ಷದವರು ನಾನಾ ಕಡೆ ಹಳ್ಳ ತೋಡುವ ಯತ್ನದಲ್ಲಿದ್ದಾರೆ. ಕೆಲವರು ಕುದುರೆ ಲಗಾಮು ಹಿಡಿಯಲು ಪ್ಲ್ಯಾನ್ ಮಾಡಿ ಕುಂತಿದ್ದಾರೆ. ಇಷ್ಟೆಲ್ಲಾ ಕುದುರೆ, ಲಗಾಮು, ಹಳ್ಳಗಳ ಬಗ್ಗೆ ಅಳೆದು ತೂಗಿ ವರದಿ ತರಿಸಿಕೊಂಡ ಕಾಂಗ್ರೆಸ್ ಹೈಕಮಾಂಡ್.. ಹ್ಯಾಂಡ್ಸಪ್ ಇದು ಹಳೆ ಕಾಲ.. ನಾಯಕತ್ವ ಆಯ್ಕೆಗೆ ಚಳಿಗಾಲ.. ಅಂತಾ ನಾಯಕತ್ವ ಆಯ್ಕೆಯ ಮಾರ್ಗ ಬದಲಿಸಿದೇ ಕುಂತಿದೆ. ಇತ್ತ ರಾಜ್ಯ ಕಾಂಗ್ರೆಸ್ ಪಡಸಾಲೆಯಲ್ಲಿ ಮೇಡಂಗೆ ಯಾರು ಹಿತವರೋ…ಅವನೇ ಶ್ರೀಮನ್ನಾರಾಯಣ..! ಅಂತಾ ಕಾಯುತ್ತಾ ಕುಳಿತಿದ್ದಾರೆ ಒಂದಷ್ಟು ನಾಯಕರು.
ಹೂಚೆಂಡು: ಡೆಲ್ಲಿಯಲ್ಲಿ ಮೇಡಂ ಅವತ್ತೇ ಓಕೆ ಮಾಡ್ತಾರೆ… ನಾನು ಅದ್ಕೆ ಕ್ಯಾಪ್ಟನ್… ನಾನು ಇದ್ಕೆ ಕ್ಯಾಪ್ಟನ್ ಅಂತಾ ಕಾಂಗ್ರೆಸ್‍ನ ಎರಡು ಬಣಗಳು ಲೀಡರ್‍ಗಳು ಫುಲ್ ಖುಷಿಯಾಗಿದ್ರಂತೆ. ಎರಡು ಕಡೆಯಿಂದನೂ ಸ್ವೀಟು, ಹಾರ ತುರಾಯಿ ರೆಡಿ ಮಾಡಿ ಇಟ್ಕೊಂಡಿದ್ರಂತೆ. ಆದ್ರೆ ವಾರ ಆದ್ರೂ ಕ್ಯಾರೇ ಅಂದಿಲ್ಲ ಮೇಡಂ. ಇತ್ತ ತಂದಿದ್ದ ಹೂವೆಲ್ಲಾ ಬಾಡಿ… ಸ್ವೀಟೆಲ್ಲಾ ಖಾಲಿ..! ಅಯ್ಯೋ ಪಾಪ..!
[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]