ಕನ್ನಡ ಸಿನಿಮಾ ಮತ್ತು ಕಿರುತೆರೆ ಜಗತ್ತಿನ ಹೆಸರಾಂತ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಬುಧವಾರ ನಿಧನ ಹೊಂದಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪತ್ನಿ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಗೀತ ಕುಟುಂಬದಿಂದಲೇ ಬೆಳೆದು ಬಂದಿದ್ದ ಮನೋರಂಜನ್ ತಂದೆ ಪಂಡಿತ್ ಬಿ.ಎನ್.ಪಾರ್ಥಸಾರಥಿ ನಾಯ್ಡು ಕೂಡ ಸಂಗೀತದಲ್ಲಿ ಪಾಂಡಿತ್ಯ ಹೊಂದಿದ್ದರು. ಮಗನೂ ಇದೇ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂದು ಅಪೇಕ್ಷೆ ಪಟ್ಟಿದ್ದರು. ಅದರಂತೆ ಮನೋರಂಜನ್ 70ರ ದಶಕದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಎಂಟು ನೂರಕ್ಕೂ ಹೆಚ್ಚು ಸಂಗೀತದ ಆಲ್ಬಂ ಹೊರ ತಂದಿರುವ ಇವರು, ಮನೋರಂಜನ್ ಹೆಸರಿನ ತಂಡವನ್ನು ಕಟ್ಟಿಕೊಂಡು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್ ಆನಂದ್‌ರಾಮ್
ಕಾರ್ತಿಕ ದೀಪ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗೆ ಸಂಗೀತ ಅಳವಡಿಸಿದ ಹೆಗ್ಗಳಿಕೆ ಇವರದ್ದು. ಕೆಲಕಾಲ ಇವರು ಆದರ್ಶ ಫಿಲ್ಮ್ ಇನ್ ಸ್ಟಿಟ್ಯೂಟ್ ನಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಗೀತಾಸಕ್ತರಿಗಾಗಿ ತಮ್ಮದೇ ಆದ ಶ್ರುತಿಲಯ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿ ಸಂಗೀತ ಕ್ಷೇತ್ರಕ್ಕೆ ಹೊಸ ಹೊಸ ಪ್ರತಿಭೆಗಳನ್ನು ನೀಡಿದ್ದಾರೆ. ಅಗಲಿದೆ ಹಿರಿಯ ಸಂಗೀತ ಜೀವಕ್ಕೆ ಕನ್ನಡ ಕಿರುತೆರೆ ಕಲಾವಿದರು ಮತ್ತು ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.