ಮುಂಬೈ: ಸದ್ಯ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್ (Sarfaraz Khan) ಅವರ ಕಿರಿಯ ಸಹೋದರ ರಣಜಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ಬರೋಡಾ ವಿರುದ್ಧ ನಡೆದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ (Musheer Khan) ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ 18 ಓವರ್‌ಗಳಲ್ಲಿ 99 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಮುಂಬೈ ತಂಡಕ್ಕೆ ಮುಶೀರ್ ಆಸರೆಯಾಗಿದ್ದಾರೆ.
3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಭದ್ರವಾಗಿ ನೆಲೆಯೂರಿದ ಮುಶೀರ್ 350 ಎಸೆತಗಳಲ್ಲಿ 18 ಬೌಂಡರಿಗಳೊಂದಿಗೆ ಅಜೇಯ ದ್ವಿಶತಕ ಬಾರಿಸಿದ್ದಾರೆ. ಒಟ್ಟು 357 ಎಸೆತಗಳಲ್ಲಿ 203 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇದರಿಂದಾಗಿ ಮುಂಬೈ ತಂಡವು 384 ರನ್‌ಗಳ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 96 ರನ್ ಗಳಿಸಿದ್ದ ಮುಶೀರ್ ದ್ವಿಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ರಣಜಿಯಲ್ಲಿ ಸರ್ಫರಾಜ್ ಸಹೋದರ ಶೈನ್:
ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ (Maiden Double Hundred) ಪರಿವರ್ತಿಸಿದ ಮುಶೀರ್ ಖಾನ್, ರಣಜಿ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೇ (18 ವರ್ಷ 362 ದಿನಗಳು) ದ್ವಿಶತಕ ಸಿಡಿಸಿದ ಮುಂಬೈನ 2ನೇ ಬ್ಯಾಟರ್ ಸಹ ಎನಿಸಿಕೊಂಡಿದ್ದಾರೆ. 1996-97ರಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ರಣಜಿ ಟ್ರೋಫಿಯಲ್ಲಿ ವಾಸಿಂ ಜಾಫರ್ 18 ವರ್ಷ 262 ದಿನಗಳು ವಯಸ್ಸಿನವರಿದ್ದಾಗ ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದರು.
ಸದ್ಯ ಮುಂಬೈ ನೀಡಿದ 385 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿರುವ ಬರೋಡಾ ತಂಡ 8 ಓವರ್‌ಗಳಲ್ಲಿ 33 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.