ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲಿನ ಪೋಕ್ಸೋ ಕೇಸ್ ತನಿಖೆ ತೀವ್ರಗೊಂಡಿದೆ. ಪ್ರಕರಣ ವರದಿಯಾದ ಮೂರು ದಿನಗಳ ಬಳಿಕ ಸಂತ್ರಸ್ತ ಬಾಲಕಿಯರನ್ನು ಪೊಲೀಸರು ಚಿತ್ರದುರ್ಗದ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
CRPC 164 ಅಡಿ ಸಂತ್ರಸ್ತರು, ಮಹಿಳಾ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ನ್ಯಾಯಾಧೀಶರ ಸಮ್ಮುಖದಲ್ಲಿ ಸಂತ್ರಸ್ತ ಬಾಲಕಿಯರ ರಕ್ತದ ಮಾದರಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಸದ್ಯ ಮುಚ್ಚಿದ ಲಕೋಟೆಯಲ್ಲಿರುವ ಸಂತ್ರಸ್ತರ ಹೇಳಿಕೆಯನ್ನು ಗೌಪ್ಯವಾಗಿ ಇರಿಸಲಾಗಿದೆ. ಸಂತ್ರಸ್ತ ಬಾಲಕಿಯರ ಈ ಹೇಳಿಕೆ ಮೇಲೆ ಮುರುಘಾ ಶರಣರ ಭವಿಷ್ಯ ನಿರ್ಧಾರವಾಗಲಿದೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಮುಂದಿನ ಪೀಳಿಗೆ ಭವಿಷ್ಯವನ್ನು ಉಜ್ವಲಗೊಳಿಸಲಿದೆ: ರಾಜ್ಯಪಾಲರು
ಇಂದು ಕೋರ್ಟ್ ಮುಂದೆ ಪರ-ವಿರೋಧಿ ಪ್ರತಿಭಟನೆಗಳು ನಡೆದಿದ್ದು, ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯ್ತು. ಈ ಮಧ್ಯೆ, ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿರುವ ಕಾರಣ ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಈ ಮಧ್ಯೆ, 20ಕ್ಕೂ ಹೆಚ್ಚು ಸ್ವಾಮೀಜಿಗಳು ಸುದ್ದಿಗೋಷ್ಟಿ ನಡೆಸಿ, ಮುರುಘಾ ಮಠದ ಶ್ರೀಗಳಿಗೆ ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿವಿಧ ಮಠದ ಶ್ರೀಗಳು, ಮುರುಘಾ ಶರಣರು ಮಕ್ಕಳು ದೇವರ ಸಮಾನ ಎಂದು ತಿಳಿದಿರುವವರು, ಅವರು ನಾಡಿನ ಗಮನ ಸೆಳೆದಿದ್ದಾರೆ. ಬಹಳ ಮುಂಚೂಣಿಯಲ್ಲಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮೀಜಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ಖಂಡಿತಾಗಿಯೂ ಈ ಪ್ರಕರಣದಿಂದ ಹೊರ ಬರ್ತಾರೆ, ಸತ್ಯಕ್ಕೆ ಜಯವಾಗುತ್ತದೆ ಎಂದು ಎಲ್ಲಾ ಮಠಾಧೀಶರು ಶ್ರೀಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.