ಚಿತ್ರದುರ್ಗ: ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಇಂದು ಒಂದನೇ ಅಪರ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ ಶರಣಾಗಿದ್ದ ಮುರುಘಾ ಶ್ರೀಗೆ (Murugha Shri) ಮೇ 27ರವರೆಗೆ ಕೋರ್ಟ್ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.
ಪೋಕ್ಸೊ ಕೇಸಲ್ಲಿ (POCSO Case) ಸತತ ಒಂದು ವರ್ಷ ಜೈಲು ಸೇರಿದ್ದ ಮುರುಘಾ ಶ್ರೀಗೆ 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಅದನ್ನು ಪ್ರಶ್ನಿಸಿ ಮಠದ ಭಕ್ತ ಹಾಗೂ ಮಾಜಿ ಸಚಿವ ಹೆಚ್ ಏಕಾಂತಯ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು
ಇನ್ನು ಈ ಕೇಸ್‌ನ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುರುಘಾ ಶ್ರೀಗೆ ಮಂಜೂರಾಗಿದ್ದ ಜಾಮೀನನ್ನು ರದ್ದುಗೊಳಿಸಿ ಆದೇಶಿಸಿದ್ದು, ಒಂದು ವಾರದೊಳಗೆ ಕೋರ್ಟ್ ಮುಂದೆ ಹಾಜಾರಾಗುವಂತೆ ಸೂಚಿಸಿತ್ತು. ಹೀಗಾಗಿ ಇಂದು ದಾವಣಗೆರೆಯಿಂದ ನೇರವಾಗಿ ಚಿತ್ರದುರ್ಗದ ಒಂದನೇ ಅಪರ ನ್ಯಾಯಾಲಯಕ್ಕೆ ಮುರುಘಾ ಶ್ರೀ ಹಾಜರಾಗಿದ್ದು, ಸತತ ಒಂದು ಗಂಟೆ ಕಾಲ ಕೋರ್ಟ್ ಆವರಣದಲ್ಲೇ ಕಾದು ಕುಳಿತಿದ್ದರು. ಬಳಿಕ ನ್ಯಾಯಾಧೀಶರ ಮುಂದೆ ಹಾಜರಾದ ಮುರುಘಾ ಶ್ರೀ ಕೇಸ್‌ನ ವಿಚಾರಣೆಯನ್ನು ಮೇ 27ಕ್ಕೆ ನಿಗದಿಪಡಿಸಿರುವ ಒಂದನೇ ಅಪರ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅಲ್ಲಿಯವರೆಗೆ ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇದನ್ನೂ ಓದಿ: ಅಮಿತ್ ಶಾ ಫೇಕ್ ವಿಡಿಯೋ ಕೇಸ್ – ರೇವಂತ್ ರೆಡ್ಡಿಗೆ ಸಮನ್ಸ್, ಓರ್ವ ಕಾಂಗ್ರೆಸ್ ಕಾರ್ಯಕರ್ತ ಅರೆಸ್ಟ್
ಈ ವೇಳೆ ಕೋರ್ಟ್ ಆವರಣದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು ಮುರುಘಾ ಶ್ರೀಯನ್ನು ವಶಕ್ಕೆ ಪಡೆದು, ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಿದರು. ಇಸಿಜಿ ಹಾಗು ಬಿಪಿ ಪರೀಕ್ಷೆ ನಡೆಸಿ ವೈದ್ಯರ ವರದಿ ಬಳಿಕ, ಮುರುಘಾ ಶ್ರೀಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ವೇಳೆ ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಶ್ರೀ, ಹಾವೇರಿಯ ಶಾಂತಲಿಂಗ ಶ್ರೀ, ಮುರುಘಾಶ್ರೀ ಆಪ್ತ ಜಿತೇಂದ್ರ, ವಕೀಲ ಪ್ರತಾಪ್ ಜೋಗಿ ಹಾಜರಿದ್ದರು. ಇದನ್ನೂ ಓದಿ: ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು