ChitradurgaDistrictsKarnatakaLatestMain Post

ಮುರುಘಾ ಶ್ರೀಗಳ ವಿರುದ್ಧ ಆರೋಪ- ಇಂದು ಜಡ್ಜ್ ಮುಂದೆ ಸಂತ್ರಸ್ತೆಯರ ಹೇಳಿಕೆ ದಾಖಲು

ಚಿತ್ರದುರ್ಗ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಮುರುಘಾ ಮಠಕ್ಕೆ ಈಗ ಕಂಟಕ ಶುರವಾಗಿದೆ. ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ಸಂತ್ರಸ್ತ ಬಾಲಕಿಯರ ಬಳಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಿದ್ದಾರೆ. ಇದೀಗ ನ್ಯಾಯಾಧೀಶರ ಮುಂದೆ ಸಂತ್ರಸ್ತ ಬಾಲಕಿಯರನ್ನು ಹಾಜರುಪಡಿಸುವುದು ಒಂದೇ ಬಾಕಿ ಇದೆ.

ಮಠದಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪ ಶ್ರೀಗಳಿಗೆ ಕಂಟಕವಾಗಿದೆ. ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಒಡನಾಡಿ ಸಂಸ್ಥೆಯ ಇಬ್ಬರು ಸದಸ್ಯರು, ಸಿಡಬ್ಲ್ಯೂಸಿ ಕಮಿಟಿಯ ಅಧ್ಯಕ್ಷ ಪ್ರಭಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗು ಮಹಿಳಾ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಸಂತ್ರಸ್ತೆಯರ ವಿಚಾರಣೆ ನಡೆಸಲಾಯ್ತು. ಸತತ ಐದು ಗಂಟೆಗಳ ಕಾಲ ವಿವರಣೆ ಪಡೆದಿದ್ದು, ಮೈಸೂರಿನಲ್ಲಿ ಹೇಳಿದ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯ ಡಾ.ಉಮಾರಿಂದ 2 ಗಂಟೆಗಳ ಕಾಲ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯ್ತು. ಸದ್ಯ ಬಾಲಮಂದಿರದಲ್ಲಿ ಸಂತ್ರಸ್ತ ಬಾಲಕಿಯರು ಇದ್ದಾರೆ.

ಸಿಡಬ್ಲ್ಯೂಸಿ ಕೌನ್ಸಿಲಿಂಗ್ ನಂತರ ಬಾಲಕಿಯರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇತ್ತು. ಆದರೆ ನಿನ್ನೆ ಭಾನುವಾರವಾಗಿದ್ದರಿಂದ ಇಂದು ಮಹಿಳಾ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ದತೆ ನಡೆಸಿದ್ದಾರೆ. ಮೈಸೂರಿನಲ್ಲಿ ಹೇಳಿದನ್ನೇ ನ್ಯಾಯಾಧೀಶರ ಮುಂದೆ ಹೇಳಿದರೆ, ಮುರುಘಾ ಶ್ರೀಗಳು ಪೋಕ್ಸೋ ಪ್ರಕರಣದ ಬಲೆಗೆ ಬೀಳಲಿದ್ದು, ವಿಚಾರಣೆ ಎದುರಿಸಲಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ- ಸಂತ್ರಸ್ತೆಯರ ಹೇಳಿಕೆ ಪಡೆದ ತನಿಖಾ ತಂಡ

ಏನೇ ಆಗಲಿ ನ್ಯಾಯಾಧೀಶರ ಮುಂದೆ ಸಂತ್ರಸ್ತ ಬಾಲಕಿಯರ ಹೇಳಿಕೆ ಶ್ರೀಗಳ ಭವಿಷ್ಯ ನಿರ್ಧಾರ ಮಾಡಲಿದೆ. ಇಂದು ಬೆಳಗ್ಗೆಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ತನಿಖಾ ಅಧಿಕಾರಿಗಳು ನಡೆಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button