ChitradurgaDistrictsKarnatakaLatestLeading NewsMain Post

ಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ಧ: ಆರೋಪದ ಬಗ್ಗೆ ಮುರುಘಾ ಶ್ರೀ ಮೊದಲ ಮಾತು

ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಬೆನ್ನಲ್ಲೇ ವಿವಿಧ ಮಠಗಳ ಮಠಾಧೀಶರು, ಜನಪ್ರತಿನಿಧಿಗಳು ಶ್ರೀಗಳ ಬೆಂಬಲಕ್ಕೆ ನಿಂತಿದ್ದಾರೆ.

ಮಠಕ್ಕೆ ಆಗಮಿಸಿ ಶ್ರೀಗಳೊಂದಿಗೆ ಸಮಾಲೋಚನೆ ನಡೆಸುವ ಜೊತೆಗೆ ಮುರುಘಾ ಶರಣರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದಲೂ ಮೌನವಹಿಸಿದ್ದ ಮುರುಘಾ ಮಠದ ಶ್ರೀಗಳು ತಮ್ಮ ಬೆಂಬಲಿಗರಾದ ಮಾದಾರ ಚನ್ನಯ್ಯ ಶ್ರೀ ಲಿಂಗಮೂರ್ತಿ ಅವರು ಬಂದ ಬಳಿಕ ಸಭೆಯಲ್ಲಿ ಮಾತನಾಡಿದ್ದಾರೆ. ಶ್ರೀಗಳು ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಇದೀಗ ಪಬ್ಲಿಕ್ ಟಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್‌

ಘಟನೆ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಶ್ರೀಗಳು, ನಾವು ಸಂದಾನಕ್ಕೂ ಸಿದ್ಧ ಸಮರಕ್ಕೂ ಬದ್ದರಿದ್ದೇವೆ. ಸಂದಾನ ಮತ್ತೆ ಸಮರ ಎರಡೂ ಆಯ್ಕೆಗಳು ಇವೆ. ಸಂದಾನ ನೀವು ಮಾಡಿ, ಒಂದು ವೇಳೆ ಅದು ಫೇಲ್ ಆದರೆ ಸಮರ ಇದ್ದೇ ಇದೆ. ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಈ ರೀತಿ ಪಿತೂರಿ, ಒಳಸಂಚು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಆಡಿಯೋನಲ್ಲಿ ಏನಿದೆ?
ನಮ್ಮ ಜೊತೆ ಜಗಳವಾಡಿದ್ರೆ ಏನಾದರೂ ಸಿಗುತ್ತದೆ. ಬೇರೆಯವರ ಜೊತೆ ಜಗಳ ಮಾಡಿದ್ರೆ ಏನು ಸಿಗುತ್ತೆ? ಮುರುಘಾ ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಕಳೆದ 15 ವರ್ಷಗಳಿಂದ ಮುರುಘಾ ಮಠವನ್ನು ಜನ ನೋಡುವ ಹಾಗೆ ಮಾಡಿದ್ದೇವೆ. ಆದರೆ ಬ್ಲ್ಯಾಕ್‌ಮೇಲ್‌ ತಂತ್ರದ ಮೂಲಕ ಅಧಿಕಾರ ಬೇಕು ಎನ್ನುವುದು ಇಲ್ಲಿನ ಧೋರಣೆಯಾಗಿದೆ. ಇದನ್ನೂ ಓದಿ: ಮುರುಘಾ ಮಠದ ಆಡಳಿತಾಧಿಕಾರಿ, ಅಧಿಕಾರಿ ಪತ್ನಿ ವಿರುದ್ಧ ಕೇಸ್

ನಾವು ಸಂದಾನಕ್ಕೂ ಸಿದ್ಧ ಸಮರಕ್ಕೂ ಬದ್ಧರಿದ್ದೇವೆ. ಸಂದಾನ ಮತ್ತೆ ಸಮರ ಎರಡೂ ಆಯ್ಕೆಗಳು ಇವೆ. ಸಂದಾನ ನೀವು ಮಾಡಿ, ಅದು ಫೇಲ್ ಆದರೆ ಸಮರ ಇದ್ದೇ ಇದೆ. ನಮ್ಮ ಪಕ್ಕದಲ್ಲೇ ಇದ್ದು ಹೋದವರೇ ಈ ರೀತಿ ಪಿತೂರಿ, ಒಳಸಂಚು ಮಾಡಿದ್ದಾರೆ. ಈ ಒಳಸಂಚಿನ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಈ ಸಮಸ್ಯೆ, ಆರೋಪ ಶಾಶ್ವತವಲ್ಲ. ಇದು ಮುರುಘಾ ಶರಣರ ಅಭಿಮಾನವನ್ನು ಹೆಚ್ಚಿಸುವ ಕೆಲಸವಾಗಿದೆ. ರಾಜ್ಯದ ವಿವಿಧ ಕಡೆಯಿಂದ ಜನರು ಬರ್ತಾ ಇದ್ದಾರೆ, ಫೋನ್ ಮಾಡ್ತಾ ಇದ್ದಾರೆ. ನಿಮ್ಮ ಜೊತೆ ನಾವು ಇದ್ದೇವೆ ಎಂದು ಧೈರ್ಯ ಹೇಳುತ್ತಿದ್ದಾರೆ.

ನಮ್ಮ ಮೇಲಿನ ಅಭಿಮಾನ ಜಾಗೃತವಾಗುತ್ತಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತೆ. ಮಾನವ ಬಗೆಹರಿಸುವ ಪರಿಹಾರ ಇರುತ್ತೆ. ಕೆಲವೊಂದನ್ನು ಕಾಲವೇ ನಿರ್ಣಯ ಮಾಡುತ್ತೆ. ಕಾಲ ಕೂಡಿ ಬಂದರೆ ಸುಮ್ಮನಾಗುತ್ತೇನೆ, ಇಲ್ಲವಾದ್ರೆ ಹೋರಾಟಕ್ಕೆ ಮುಂದಾಗುತ್ತೇನೆ.

ಕೆಳಗಡೆ ಇದ್ದಾಗ ಗಾಳಿ ಹೊಡೆತ ಕಮ್ಮಿ ಇರುತ್ತವೆ. ಮೇಲೆಕ್ಕೆ ಹೋದಂತೆಲ್ಲ ಗಾಳಿ ಹೊಡೆತ ಬಹಳ ಇರುತ್ತೆ. ಸಣ್ಣವರಿಗೆ ಸಣ್ಣ ಪೆಟ್ಟುಗಳು ಬಂದಂತೆ ದೊಡ್ಡವರಿಗೆ ದೊಡ್ಡ ಪೆಟ್ಟುಗಳು ಬರುತ್ತವೆ. ಎಲ್ಲಾ ಸಮಾಜ ಸುಧಾರಕರ ಕಾಲದಲ್ಲೂ ಈ ರೀತಿ ಸಾತ್ವಿಕ ಶಕ್ತಿ ದುಷ್ಟ ಶಕ್ತಿಗಳು ಎರಡು ಜೊತೆ-ಜೊತೆಯಾಗಿ ಇರುತ್ತವೆ. ಸಾತ್ವಿಕ ಸಮಾಜ ಪುರುಷರು ಸಕಾರಾತ್ಮಕ ಧೋರಣೆ ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ನಕಾರಾತ್ಮಕ ಧೋರಣೆಯೂ ಇರುತ್ತದೆ.

ಏಸು ಕ್ರಿಸ್ತನನ್ನು ಶಿಲುಭೆಗೆ ಏರಿಸಿದ್ದು ಬೇರೆಯವರಲ್ಲ ಅದೇ ಧರ್ಮದವರು. ಪೈಗಂಬರ್‌ಗೆ ಟಾರ್ಚರ್ ಮಾಡಿದ್ದೂ ಅದೇ ಧರ್ಮದವರು. ಗೌತಮ ಬುದ್ಧನಿಗೆ ಹಂದಿಯ ಮಾಂಸದ ರಸ ಉಣ್ಣಿಸಿದವರೂ ಅದೇ ಧರ್ಮದವರು. ಸಾಕ್ರೆಟೀಸ್‌ನ ಜೀವನದಲ್ಲಿಯೂ ಕೂಡ ಇದೇ ಆಗಿದ್ದು. ರಾಜಸತ್ತೆ, ಪ್ರಭುಸತ್ತೆ ವಿರುದ್ಧವಾಗಿ ಅವರ ಹೋರಾಟ ಇತ್ತು. ನಮಗೆ ಸಾಕ್ರೆಟೀಸ್‌ಗೆ ಸಿಕ್ಕ ಶಿಷ್ಯ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಶಿಷ್ಯರು ಮರಣದಂಡನೆ ತಪ್ಪಿಸಲು ಎಲ್ಲಾ ಪ್ರಯತ್ನ ಮಾಡುತ್ತಾರೆ. ಆದಾಗ್ಯೂ ಸಾಕ್ರೆಟೀಸ್ ರಾಜಿಯಾಗಲಿಲ್ಲ.

ಜಗತ್ತಿನಲ್ಲಿ ಮೈಗಳ್ಳರು, ಜೀವಗಳ್ಳರು ಇದ್ದಾರೆ. ಏನಾದರೂ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕವಾಗುತ್ತೆ ಎಂದು ಸಾಕ್ರೆಟೀಸ್ ಹೇಳಿದ್ದರು. ಈ ಜಗತ್ತಿನಲ್ಲಿ ಧರ್ಮಾಂಧರು, ಅಂದರು ಈ ರೀತಿಯ ಸನ್ನಿವೇಶ ಎದುರಿಸಿಲ್ಲ. ಯಾರು ತಾತ್ವಿಕತೆ, ಸೈದ್ಧಾಂತಿಕ ತಳಹದಿಯ ಮೇಲೆ ನಡೆಯುತ್ತಾರೆ ಅವರಿಗೆ ಹೆಜ್ಜೆ ಹೆಜ್ಜೆಗೂ ಮುಳ್ಳು ಇರುತ್ತವೆ.

ಗಾಂಧೀಜಿ, ಬಸವಣ್ಣನವರಿಗೂ ಕೂಡ ದುರಂತಗಳು ಆಗಿದೆ. ನಾವು ಕೂಡ ಹೊರತಾಗಿಲ್ಲ. ಕಿತ್ತೂರು, ಪಾಳೆಗಾರ ಸಂಸ್ಥಾನ ಹಾಳಾಗಿದ್ದು ಸ್ವಜಾತಿಯ ಜನರಿಂದಲೇ. ಇದು ಸತ್ಯಯುತವಾಗಿ ಬಂದಿರುವ ಘಟನೆಗಳು. ಮುಸ್ಲಿಂ, ಕ್ರಿಶ್ಚಿಯನ್ನರು ದಲಿತರು, ಎಲ್ಲರೂ ಸೇರಿ ನನಗೆ ಧೈರ್ಯ ತುಂಬಿದ್ದಾರೆ. ನಾವು ಹೇಳಿ ಕರೆಸಿಲ್ಲ, ಮುಂಜಾನೆಯ ಸುದ್ದಿ ನೋಡಿ ನೀವೆಲ್ಲ ಬಂದಿದ್ದೀರಿ. ಈ ಘಟನೆಯಿಂದ ನನಗಿಂತಲೂ ನಿಮಗೇ ಬಹಳಷ್ಟು ನೋವಾಗಿದೆ. ನೋವಿನಿಂದ ನೀವೆಲ್ಲಾ ಬಂದಿದ್ದೀರಿ. ನಮ್ಮ ಮೇಲಿನ ಅಭಿಮಾನ ಜಾಗೃತವಾಗುತ್ತಿದೆ ಎಂದು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button