ಮಂಡ್ಯ: ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ಪಿಎಸ್‌ಎಸ್‌ಕೆ ಕಂಪನಿ (PSSK Sugar Factory) 45 ನೌಕರರನ್ನು ಏಕಾಏಕಿ ತೆಗೆದು ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಯಲ್ಲಿ ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯೂ ಒಂದು. ಆದರೆ, ಈ ಕಾರ್ಖಾನೆ ನಷ್ಟದಲ್ಲಿ ಸಿಲುಕಿದೆ ಎಂಬ ಕಾರಣಕ್ಕೆ ಕಳೆದ ಐದು ವರ್ಷಗಳ ಹಿಂದೆ ಮಾಜಿ ಸಚಿವ ಮುರುಗೇಶ್ ನಿರಾಣಿಯವರ ನಿರಾಣಿ ಶುಗರ್ಸ್ ಕಂಪನಿಗೆ 40 ವರ್ಷಗಳ ಗುತ್ತಿಗೆ ನೀಡಲಾಗಿತ್ತು. ಆ ವೇಳೆ ಒಂದಷ್ಟು ಷರತ್ತು ವಿಧಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಪಿಎಸ್‌ಎಸ್‌ಕೆ ಕಂಪನಿ ನೌಕರರನ್ನ ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದೆಂದು ಒಪ್ಪಂದ ಆಗಿತ್ತು. ಆದರೆ ಈಗ ಸ್ಥಳೀಯ 45 ಮಂದಿ ಕಂಪನಿ ನೌಕರರನ್ನ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ದಬ್ಬಾಳಿಕೆ ನಡೆಸಿದೆ. ಇದರಿಂದ ಕೆಲಸ ಕಳೆದುಕೊಂಡ ನೌಕರರು ಜೀವನ ಹೇಗಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
45 ಮಂದಿ ನೌಕರರನ್ನ ಕೆಲಸದಿಂದ ತೆಗೆದು ಹಾಕಿರುವುದರಿಂದ ಆ ನೌಕರರ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ವರ್ಷದ ಹಿಂದೆಯೇ ಇದೇ ರೀತಿ ಈ ನೌಕರರನ್ನ ಕೆಲಸದಿಂದ ವಜಾ ಮಾಡಲಾಗಿತ್ತು. ಆಗ ಹೈಕೋರ್ಟ್‌ನ ಮೆಟ್ಟಿಲು ಸಹ ಏರಿದ್ದರು. ಎಲ್ಲ ವಿಚಾರಣೆ ನಡೆಸಿ, ಒಪ್ಪಂದ ಪರಿಶೀಲಿಸಿದ ನ್ಯಾಯಾಲಯ ಕೆಲಸದಿಂದ ತೆಗೆಯದಂತೆ ಸೂಚನೆ ಕೊಟ್ಟಿತ್ತು. ಆದರೆ, ನ್ಯಾಯಾಲಯದ ಆದೇಶವನ್ನೂ ಪರಿಗಣಿಸದೇ ಮುರುಗೇಶ್ ನಿರಾಣಿ ಮಾಲೀಕತ್ವದ ಕಂಪನಿ ಮತ್ತೆ ತನ್ನ ಉದ್ದಟತನ ಪ್ರದರ್ಶಿಸಿದೆ ಎಂದು ಆರೋಪ ಕೇಳಿಬಂದಿದೆ.
Advertisement
15, 20 ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿದ ನೌಕರರನ್ನ ಏಕಾಏಕಿ ಕೆಲಸದಿಂದ ವಜಾ ಮಾಡಿ ಇದೀಗ ಬೀದಿಗೆ ತಂದು ನಿಲ್ಲಿಸಿದೆ. ಕಾರ್ಖಾನೆಯ ಶೇ.90 ರಷ್ಟು ಸಿಬ್ಬಂದಿ ಹೊರ ರಾಜ್ಯದವರನ್ನೇ ನೇಮಕ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ.
Advertisement
ಕೆಲಸದಿಂದ ಸ್ಥಳೀಯ ಕಂಪನಿ ನೌಕರರ ವಜಾ ವಿಚಾರ ತಿಳಿಯುತ್ತಿದ್ದಂತೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾರ್ಖಾನೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಒಪ್ಪಂದ ಪತ್ರ, ಕೋರ್ಟ್ ಆದೇಶವನ್ನ ನಿರಾಣಿ ಶುಗರ್ಸ್ ಕಂಪನಿ ವ್ಯವಸ್ಥಾಪಕರಿಗೆ ನೀಡಿ ನೌಕರರನ್ನ ವಾಪಸ್ ಕೆಲಸ ಸೇರಿಸಿಕೊಳ್ಳುವಂತೆ ತಾಕೀತು ಮಾಡಿದರು. ಆದರೆ, ಕಾರ್ಖಾನೆ ವ್ಯವಸ್ಥಾಪಕರು ಅದಕ್ಕೆ ಮನ್ನಣೆ ನೀಡಿಲ್ಲ ಎನ್ನಲಾಗಿದೆ.