ವಿಜಯಪುರ: ವರದಕ್ಷಿಣೆಗಾಗಿ ಮಹಿಳೆಯೊಬ್ಬರ ಪತಿಯ ಕುಟುಂಬಸ್ಥರು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕನ್ನೊಳ್ಳಿಯಲ್ಲಿ ನಡೆದಿದೆ.
ಪತಿ ವಿಶ್ವನಾಥ ಅಡ್ಡಿ, ಮಾವ ಕಂಠೇಪ್ಪ, ಅತ್ತೆ ಶಂಕರವ್ವ ಸೇರಿ ಭಾಗ್ಯವತಿ ಎಂಬ ಮಹಿಳೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಮಹಿಳೆ 90% ರಷ್ಟು ಸುಟ್ಟ ಗಾಯಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಆರೋಪಿ ವಿಶ್ವನಾಥ ಅಡ್ಡಿ ಮತ್ತು ಭಾಗ್ಯವತಿ ಮದುವೆಯಾಗಿ 2 ವರ್ಷಗಳಾಗಿದ್ದು, ಆರೋಪಿ ಪತಿ ಮದುವೆಯಾದಗಿನಿಂದ ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದನು. ಪತಿ ಅಷ್ಟೇ ಅಲ್ಲದೇ ಆಕೆಯ ಅತ್ತೆ ಮಾವ ಕೂಡ ತವರು ಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಮಂಗಳವಾರ ಇದೇ ವಿಚಾರಕ್ಕೆ ಮತ್ತೆ ಜಗಳವಾಡಿ ಮುಂಜಾನೆ ಸುಮಾರು 4 ಗಂಟೆಗೆ ಪತಿ, ಅತ್ತೆ, ಮಾವ ಸೇರಿಕೊಂಡು ಶೌಚಾಲಯದಲ್ಲಿ 5 ಲೀಟರ್ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಹೊಗೆ ಬರುತ್ತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಬಂದು ಕಾಪಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಭಾಗ್ಯವತಿ ಸುಮಾರು 90% ಭಾಗದಷ್ಟು ಸುಟ್ಟು ಹೋಗಿದ್ದರು. ಸದ್ಯ ಭಾಗ್ಯವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಈ ಪ್ರಕರಣ ಸಂಬಂಧ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.