ನವದೆಹಲಿ: ಹತ್ಯೆಗೀಡಾದ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರ ಮುಖವನ್ನು ಅವರ ತಂದೆ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಸಿಧು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಅವರ ತಂದೆ ಬಲ್ಕೌರ್ ಸಿಂಗ್ ಅವರು ತಮ್ಮ ಕೈ ಮೇಲೆ ಮಗನ ಮುಖವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಕುರಿತು ಅವರು ಸಿಧು ಅವರ ಅಧಿಕೃತ ಇನ್‍ಸ್ಟಾಗ್ರಾಮ್‍ನ ಸ್ಟೋರಿಯಲ್ಲಿ ಪೋಸ್ಟ್ ಹಾಕಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಬಲ್ಕೌರ್ ಸಿಂಗ್ ಅವರು, ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವುದನ್ನು ತೋರಿಸಿರುವುದು ಸರೆಯಾಗಿದೆ. ಈ ಟ್ಯಾಟೂದಲ್ಲಿ ಸಿಧು ತಮ್ಮ ಮುಖದ ಪಕ್ಕದಲ್ಲಿ ಗನ್ ಹಿಡಿದು ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಫೋಟೋ ಕೆಳಗೆ ಗುರುಮುಖಿ ಲಿಪಿಯಲ್ಲಿ ‘ಸರ್ವಾನ್ ಪುಟ್ಟ್’ ಎಂದು ಬರೆಯಲಾಗಿದೆ. ‘ಸರ್ವಾನ್ ಪುಟ್ಟ್’ ಎಂದರೆ ವಿಧೇಯ ಮತ್ತು ಕಾಳಜಿಯುಳ್ಳ ಮಗ. ಇದನ್ನೂ ಓದಿ: ಖ್ಯಾತ ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಎನ್ ಕೌಂಟರ್ ಮೂಲಕ ಉತ್ತರ : ಗುಂಡಿನ ದಾಳಿಗೆ ನಾಲ್ವರು ಹಂತಕರ ಬಲಿ
ಹತ್ಯೆಯಾಗಿದ್ದು ಹೇಗೆ?
ಜವಾಹರ್ ಕೆ ಗ್ರಾಮದ ದೇವಸ್ಥಾನದ ಬಳಿ ಮೂಸೆ ವಾಲಾ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಕಾರಿನ ಮೇಲೆ 10 ಬಾರಿ ಗುಂಡು ಹಾರಿಸಿದ್ದರು. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಅವರನ್ನು ಮಾನ್ಸಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಹಂತಕರು ಎನ್‍ಕೌಂಟರ್
ಈ ಹತ್ಯೆಗೆ ದೇಶದೆಲ್ಲೆಡೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಹಂತಕರ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಿತ್ತು. ನಾಪತ್ತೆಯಾಗಿದ್ದ ಹಂತಕರು ಅಮೃತಸರದ ಸಮೀಪದ ಒಂಟಿ ಮನೆಯೊಂದರಲ್ಲಿ ಅವಿತು ಕುಳಿತಿದ್ದರು. ಶರಣಾಗಲು ಒಪ್ಪದ ಹಂತಕರು ಗುಂಡಿನ ದಾಳಿ ನಡೆಸಿದಾಗ ಪೊಲೀಸರು ಎನ್‌ಕೌಂಟರ್ ಮಾಡಿ ಹಂತಕರನ್ನು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನ ಗಡಿಗೆ ಕೇವಲ 10 ಕಿಮೀ ದೂರದಲ್ಲಿರುವ ಹಳ್ಳಿಯಲ್ಲಿ ಈ ಎನ್‍ಕೌಂಟರ್ ನಡೆದಿತ್ತು. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ