– ಗುರಾಯಿಸಿದ್ದಕ್ಕೆ ಯುವಕನ ಕೊಲೆ
– ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ, ಮಾಹಿತಿ ನೀಡಲು ಪೊಲೀಸ್ ಹಿಂದೇಟು
ಕಲಬುರಗಿ: ಜಿಲ್ಲೆಯ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ವಿಚಾರಣೆ ನಡೆಸಿದಾಗ ಮೂರು ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದೆ.
ಕಳೆದ ಕೆಲ ತಿಂಗಳ ಹಿಂದೆ ಕಲಬುರಗಿಯ ಗ್ರಾಮೀಣ ಹಾಗೂ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆ ಹಾಗೂ ದಾಲ್ ಮಿಲ್ ಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ತನಿಖೆಗಿಳಿದ ಚೌಕ ಪೊಲೀಸರು ಪ್ರಕರಣ ಸಂಬಂಧ ಕಪನೂರ ಗ್ರಾಮದ ನಿಂಗಪ್ಪ, ಶಹಾಬುದ್ದಿನ್ ಮತ್ತು ಶಿವಕುಮಾರ್ ನನ್ನ ಬಂಧಿಸಿದ್ದಾರೆ.
Advertisement
Advertisement
ಕಳ್ಳತನ ಹೇಗೆ ಮಾಡುತ್ತಿದ್ದರು?
ಬಂಧಿತ ಆರೋಪಿಗಳು ಹಾಲು ಮಾರಾಟಗಾರರಾಗಿದ್ದು, ಕಲಬುರಗಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಹಾಲು ಹಾಕುತ್ತಿದ್ದರು. ಈ ವೇಳೆಯಲ್ಲಿ ಯಾವ ಮನೆಯವರು ಎರಡು ದಿನಗಳ ಮಟ್ಟಿಗೆ ಹಾಲು ಬೇಡ ಅಂತ ಹೇಳುತ್ತಿದ್ದರೋ ಅಂತಹ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕೆ ಮುಂದಾಗಿದ್ದರು. ಇದರಲ್ಲಿ ಪ್ರಮುಖವಾಗಿ ಕಲಬುರಗಿಯ ಮಠಾಧೀಶರೊಬ್ಬರು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಯಲ್ಲಿ 3 ಕೆ.ಜಿ ಬಂಗಾರ ಹಾಗೂ ಇತರೆ ಐದಾರು ಮನೆಗಳಲ್ಲಿ ಅರ್ಧ ಕೆ.ಜಿ ಗೂ ಅಧಿಕ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದಾರೆ ಎಂದು ಪ್ರಕರಣದ ತನಿಖೆ ವೇಳೆ ತಿಳಿದು ಬಂದಿದೆ.
Advertisement
ಮೊದಲನೆ ಕೊಲೆ?
ಪ್ರಕರಣ ಬಗ್ಗೆ ತೀವ್ರ ವಿಚಾರಣೆ ನಡೆಸಿದ ಪೊಲೀಸರಿಗೆ ಶಿವಾಜಿನಗರ ನಿವಾಸಿ ಯಶ್‍ರಾಜ್ ಅಳಗೇರಾ ಯುವಕ ಬಂಧಿತ ಆರೋಪಿಗಳನ್ನು ಗುರಾಯಿಸಿ ನೋಡಿದ್ದಕ್ಕೆ ಕಪನೂರಿನ ಎಮ್ಮೆ ಕಟ್ಟುವ ಶೇಡ್‍ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಬಳಿಕ ನಾಡ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಬಳಿಕ ಆತನ ಶವವನ್ನು ಒಂದು ದಿನದ ಮಟ್ಟಿಗೆ ಅದೇ ಶೆಡ್‍ನಲ್ಲಿಟ್ಟು ನಂತರ ಕಪನೂರ ಪ್ರದೇಶ ಖಬರ್ ಸ್ತಾನದಲ್ಲಿ ಮೊದಲೇ ಹೂತಿಟ್ಟ ಶವದ ಮೇಲೆ ಯಶರಾಜ್ ಶವವನ್ನು ಹೂತಿದ್ದರು.
Advertisement
ಕೊಲೆಯಾದ ಯುವಕ ಹಿಂದೂ ಆಗಿರುವ ಕಾರಣ ಇದು ಕೋಮು ಗಲಭೆ ಆಗಬಹುದು ಅಂತ ಅನುಮಾನದಿಂದ ಆ ಶವವನ್ನು ಬೇರೆಡೆ ಸ್ಥಳಾಂತರಕ್ಕೆ ಮುಂದಾಗಿದ್ದರು. ಯಾಕೆಂದರೆ ಕೊಲೆ ಆರೋಪಿಗಳಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಹಿನ್ನೆಲೆಯಲ್ಲಿ ಯಶರಾಜ್ ನ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋಗಿ ಕಲಬುರಗಿಯ ಹಾಗರಗಾ ಗ್ರಾಮದ ಖಬರಸ್ತಾನ್ ನ ಮರದ ಕೆಳಗಡೆ ಹೂತಿಟ್ಟು ಅಲ್ಲಿಯೇ ನಾಡಪಿಸ್ತೂಲ್ ಬಚ್ಚಿಟ್ಟಿದ್ದಾರೆ. ಕಾನೂನು ಸಲಹೆ ಪಡೆದು ಪೊಲೀಸರು ಈ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಎರಡನೇ ಮತ್ತು ಮೂರನೆ ಕೋಲೆ:
ಬಿಹಾರ ಮೂಲದ ಯುವಕ ಪ್ರಕಾಶ್(20) ಹಾಗೂ ಸುಭಾಷ್ ಚಂದ್ರ ಎಂಬವರನ್ನು ದಾಲ್ ಮಿಲ್ ಕಳ್ಳತನ ಸಂದರ್ಭದಲ್ಲಿ ಅಡ್ಡ ಬಂದರು ಎಂದು ಈ ಮೂರು ಜನ ಆರೋಪಿಗಳ ಜೊತೆ ಮತ್ತೊಬ್ಬ ಪ್ರಮುಖ ಆರೋಪಿ ಸೇರಿ ಕೊಲೆ ಮಾಡಿದ್ದರು.
ಮೂರು ಕೊಲೆಗಳನ್ನು ಮಾಡಿ 3.5 ಕೆ.ಜಿ ಗೂ ಅಧಿಕ ಚಿನ್ನ ಕಳ್ಳತನ ಮಾಡಿದ ಆರೋಪಿಗಳು ಸರ್ಫ ಬಜಾರ್ ನ ವಿರೇಶ್ ಎಂಬ ಚಿನ್ನದ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿರೋದಾಗಿ ತನಿಖೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಈ ಪ್ರಕಣದಲ್ಲಿ ಓರ್ವ ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ ವಹಿಸಿ ಅಂಗಡಿ ಮಾಲೀಕನ ಪರ ಲಾಬಿ ನಡೆಸಿ ಆತನನ್ನ ಬಚಾವ್ ಮಾಡಿದ್ದಾರೆ. ಅಲ್ಲದೆ ತನಿಖೆ ವೇಳೆಯಲ್ಲಿ ಪೊಲೀಸರು 35 ಸಾವಿರ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ತೋರಿಸಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ.
ಇದೀಗ ತ್ರಿವಳಿ ಕೊಲೆ ಪ್ರಕರಣ ಮತ್ತು ಕಳ್ಳತನ ಪ್ರಕರಣದ ಬಗ್ಗೆ ಪೊಲೀಸರ ತನಿಖೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾ ಪಂಚಾಯ್ತಿ ಸದಸ್ಯನ ಮಾತಿಗೆ ಪೊಲೀಸರು ತಲೆಬಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ ಪ್ರಕರಣದ ಕುರಿತು ಉನ್ನತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬಯಲಿಗೆಳೆದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ಕೋಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv