ಬಳ್ಳಾರಿ: ರಾತ್ರಿ ಕೊಲೆ ಮಾಡಿದ್ದ ರೌಡಿಶೀಟರ್ ಒಬ್ಬ ಬೆಳಗ್ಗೆ ಪೊಲೀಸರ (Police) ಮೇಲೆ ದಾಳಿ ನಡೆಸಲು ಹೋಗಿ ಗುಂಡೇಟು ತಿಂದಿರುವುದು ಹೊಸಪೇಟೆಯಲ್ಲಿ (Hospet) ನಡೆದಿದೆ.
ಗುಂಡೇಟು ತಿಂದ ಆರೋಪಿಯನ್ನು ಹುಚ್ಚಕಾಳಿ ಎಂದು ಗುರುತಿಸಲಾಗಿದೆ. ಹುಚ್ಚಕಾಳಿ, ಬುಧವಾರ (ಏ.9) ರಾತ್ರಿ ಹೊನ್ನೂರಸ್ವಾಮಿ (30) ಎಂಬವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ. ಹಳೆ ದ್ವೇಷ ಹಿನ್ನೆಲೆ ಹತ್ಯೆ ಮಾಡಿ, ಆರೋಪಿ ತಲೆಮರೆಸಿಕೊಂಡಿದ್ದ.
ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಚಾಕು ವಶಕ್ಕೆ ಪಡೆಯುವ ವೇಳೆ, ಆತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗೆ ಹಾಗೂ ದಾಳಿಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆಯಾಗಿರುವ ಹೊನ್ನೂರಸ್ವಾಮಿ ದಾವಣಗೆರೆಯಲ್ಲಿ ವಾಸವಿದ್ದ. ಹೊಸಪೇಟೆಯಲ್ಲಿ ಜಂಬುನಾಥ ಸ್ವಾಮಿ ಜಾತ್ರೆ ಹಿನ್ನಲೆ ಆತ ಕುಟುಂಬ ಸಮೇತ ಬಂದಿದ್ದ. ಈ ವೇಳೆ ಆರೋಪಿ ಜಗಳ ತೆಗೆದು ಚಾಕು ಇರಿದಿದ್ದ. ಬಳಿಕ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದ.
ವಿಜಯನಗರ (Vijayanagar) ಎಸ್‍ಪಿ ಡಾ. ಶ್ರೀಹರಿಬಾಬು ಬಿಎಲ್, ಎಎಸ್‍ಪಿ ಸಲೀಂಪಾಷಾ ಹಾಗೂ ಡಿವೈಎಸ್‍ಪಿ ಡಾ.ಮಂಜುನಾಥ್ ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.