ಹಾವೇರಿ: ಅರೆಬೆರೆ ಬೆಂದ ಸ್ಥಿತಿಯಲ್ಲಿ ವರದಹಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿನಿಯ ಮೃತ ದೇಹ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅದೇ ಗ್ರಾಮದ ಸಹೋದರ ಸಂಬಂಧಿಯಿಂದಲೇ ವಿದ್ಯಾರ್ಥಿನಿ ಹತ್ಯೆಯಾಗಿದೆ. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಶಿ ಅಲಿಯಾಸ್ ಮಂಜನಗೌಡ ಪಾಟೀಲ(28) ಬಂಧಿತ ಆರೋಪಿ. ಈತ ವಿದ್ಯಾರ್ಥಿನಿಗೆ ಸಂಬಂಧಿಯಾಗಿದ್ದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧಿಸಿದಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕವೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
Advertisement
Advertisement
ಆರೋಪಿ ಹತ್ಯೆ ನಂತರ ದಿಕ್ಕು ತೋಚದೆ ರೇಣುಕಾಳ ಶವವನ್ನ ವರದಾನದಿ ಬ್ರಿಡ್ಜ್ ಬಳಿ ಅರ್ಧಂಬರ್ಧ ಸುಟ್ಟು ಪರಾರಿಯಾಗಿದ್ದ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದು, ಇಂದು ಡಿವೈಎಸ್‍ಪಿಗಳಾದ ಕುಮಾರಪ್ಪ, ನಾರಾಯಣ ಭರಮನಿ ನೇತೃತ್ವದ ತಂಡದಿಂದ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ.
Advertisement
ಏನಿದು ಪ್ರಕರಣ?
ಆಗಸ್ಟ್ 6ರಂದು ವಿದ್ಯಾರ್ಥಿನಿ ಎಂದಿನಂತೆ ಕಾಲೇಜಿಗೆ ಹೋಗಿದ್ದಳು. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ನಂತರ ಪೋಷಕರು ಮಗಳು ಮನೆಗೆ ಬಂದಿಲ್ಲ ಎಂದು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿನಿಗಾಗಿ ಹುಡುಕಾಟ ನಡೆಸಿದ್ದರು.
Advertisement
ಗುರುವಾರ ವರದಹಳ್ಳಿ ಗ್ರಾಮದ ಬಳಿಯ ಸೇತುವೆ ಬಳಿ ರೇಣುಕಾಳ ಶವ ಪತ್ತೆಯಾಗಿತ್ತು. ಯಾರೋ ದುಷ್ಕರ್ಮಿಗಳು ರೇಣುಕಾಳನ್ನ ಹತ್ಯೆ ಮಾಡಿ ಅಧರ್ಂಬರ್ದ ಸುಟ್ಟು ಪರಾರಿ ಆಗಿದ್ದರು. ರೇಣುಕಾಳ ಶವದ ಸ್ಥಿತಿ ನೋಡಿದರೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನ ಹತ್ಯೆ ಮಾಡಿ ಸುಟ್ಟುಹಾಕಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಆರಂಭದಲ್ಲೇ ಶಂಕಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಎಸ್‍ಪಿ ಕೆ.ಪರಶುರಾಮ, ಡಿವೈಎಸ್ಪಿ ಕುಮಾರಪ್ಪ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದರು. ಜೊತೆಗೆ ಸ್ಥಳದಲ್ಲಿ ಶ್ವಾನದಳ ಹಾಗೂ ಬೆರಳಚ್ಚುತಜ್ಞರು ಪರಿಶೀಲನೆ ನಡೆಸಿದ್ದರು.