– ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿ
ಹಾಸನ: ಚಿನ್ನದ ಮಾಂಗಲ್ಯ ಸರದ (Mangalsutra) ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ (Heart Attack) ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಕುಂತಲ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನ ಮಗಳ ಮನೆಗೆ ಶಿವಮೂರ್ತಿ ಬಂದಿದ್ದ. ಮನೆಗೆ ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ. ಬಳಿಕ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ. ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಪಾಲಾಕ್ಷ ವಾಪಸ್ ಮನೆಗೆ ಬಂದ ವೇಳೆ ಶಕುಂತಲಾ ನೆಲದ ಮೇಲೆ ಬಿದ್ದಿದ್ದಳು. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ
ಪತ್ನಿ ನೆಲದ ಮೇಲೆ ಬಿದ್ದಿರುವ ಬಗ್ಗೆ ಪಾಲಾಕ್ಷ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಶಕುಂತಲಾ ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಪಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಇದೇ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ವೇಳೆ ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಅಲ್ಲದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಗ್ರಾಮದ ಕೆಲವರು ಫೋನ್ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ. ಶಿವಮೂರ್ತಿ ಪತ್ನಿ ಗ್ರಾ.ಪಂ. ಸದಸ್ಯೆ ಆಗಿದ್ದರು. ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ನಂತರ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗಿದೆ. ಚಿನ್ನದ ಸರ ಕದ್ದ ಶಿವಮೂರ್ತಿ ಅದನ್ನು ಜಾವಗಲ್‌ನ ಚಾಮುಂಡೇಶ್ವರಿ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದ. ಸದ್ಯ ಪೊಲೀಸರು ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ

