ನವದೆಹಲಿ: ದಕ್ಷಿಣ ದೆಹಲಿಯ (Delhi) ನೆಬ್ ಸರಾಯ್‌ನಲ್ಲಿ ನಡೆದ ದಂಪತಿ ಮತ್ತು ಅವರ ಮಗಳ ಭೀಕರ ಹತ್ಯೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ದಂಪತಿಯ ಪುತ್ರನೇ ಹತ್ಯೆಗೈದ ಆರೋಪಿ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಹತ್ಯೆಯಾದ ದಂಪತಿಯ ಪುತ್ರ ಅರ್ಜುನ್‌ನನ್ನು (20) ಪೊಲೀಸರು ಬಂಧಿಸಿದ್ದಾರೆ. ಆತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ. ವಿಚಾರಣೆ ವೇಳೆ ಆತ ಕೊಲೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ತಂದೆಯಿಂದ ಅವಮಾನಕ್ಕೊಳಗಾಗಿದ್ದಕ್ಕೆ ಮತ್ತು ಆಸ್ತಿಯನ್ನು ತನ್ನ ಸಹೋದರಿಗೆ ಬಿಟ್ಟುಕೊಡುವ ಉದ್ದೇಶವನ್ನು ಆತನ ಪೋಷಕರು ಹೊಂದಿದ್ದರಿಂದ ಕೊಲೆ ಮಾಡಿರುವುದಾಗಿ ಆತ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಪ್ಪ, ಅಮ್ಮ ಹಾಗೂ ಸಹೋದರಿ ನಿದ್ರೆಯಲ್ಲಿದ್ದಾಗ ಆರೋಪಿ ಇರಿದು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement -
ಕೆಲ ದಿನಗಳಿಂದ ಆರೋಪಿ ಕೊಲೆಗೆ ಯೋಜನೆ ರೂಪಿಸಿದ್ದ. ಪೋಷಕರ ವಿವಾಹ ವಾರ್ಷಿಕೋತ್ಸವದಂದು ಹತ್ಯೆ ಮಾಡಲು ನಿರ್ಧರಿಸಿದ್ದ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -
- Advertisement -
ಏನಿದು ಪ್ರಕರಣ?
ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಮಗಳು ಕವಿತಾ (23) ಅವರ ಶವಗಳು ನೆಬ್ ಸರೈನಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಅರ್ಜುನ್, ಅಪ್ಪ, ಅಮ್ಮ ತಮ್ಮ 27ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ತಾನು ಮುಂಜಾನೆ 5:30ರ ಸುಮಾರಿಗೆ ಪೋಷಕರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್ ಹೋಗಿದ್ದೆ. ಈ ಸಂದರ್ಭದಲ್ಲಿ ಕೊಲೆ ನಡೆದಿದೆ ಎಂದು ಕತೆ ಕಟ್ಟಿದ್ದ.
- Advertisement -
ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕುಟುಂಬದ ಹೊರಗಿನವರು ಯಾರೂ ಮನೆಗೆ ಪ್ರವೇಶಿಸಿಲ್ಲ ಎಂಬುದು ತಿಳಿದು ಬಂದಿದೆ. ಅಲ್ಲದೇ ಮನೆಯಲ್ಲಿ ಕಳ್ಳತನ ನಡೆದಿರಲಿಲ್ಲ. ಅರ್ಜುನ್‌ನ ಹೇಳಿಕೆಗಳು ಅನುಮಾನಾಸ್ಪದವಾಗಿರುವುದನ್ನು ಗಮನಿಸಿ, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.